ಉಪಹಾರ್ ಆಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಿಲ್ ಮತ್ತು ಗೋಪಾಲ್ ಅನ್ಸಾಲ್ ಅವರನ್ನು ದೋಷಿಗಳೆಂದು ತೀರ್ಮಾನಿಸಿ ಕೆಳನ್ಯಾಯಾಲಯ ನೀಡಿದ್ದ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.
1997ರಲ್ಲಿ ನಡೆದ ಈ ದುರ್ಘಟನೆಗೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಅನ್ಸಾಲ್ ಸಹೋದರರಿಗೆ ಸ್ವಲ್ಪ ಸಡಿಲಿಕೆ ನೀಡಿರುವ ಹೈಕೋರ್ಟ್ ಇವರ ಶಿಕ್ಷೆಯನ್ನು ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಸಿದೆ.
ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದ ಇತರ ಐವರು ಆರೋಪಿಗಳನ್ನು ನ್ಯಾಯಾಲಯ ನಿರ್ದೋಷಿಗಳೆಂದು ಹೇಳಿದ್ದು, ಇವರಲ್ಲಿ ಆರ್.ಕೆ.ಶರ್ಮಾ ಮತ್ತು ನಿರ್ಮಲ್ ಚೋಪ್ರಾ ಅವರೂ ಸೇರಿದ್ದಾರೆ.
ಸಿಬಿಐನ ಅಂತಿಮ ಅರಿಕೆಯ ಬಳಿಕ ನವೆಂಬರ್ 17ರಂದು ನ್ಯಾಯಮೂರ್ತಿ ರವೀಂದರ್ ಭಟ್ ಅವರು ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು. 59 ಮಂದಿಯನ್ನು ಆಹುತಿ ಪಡೆದಿರುವ ಅಗ್ನಿ ದುರಂತ ನಡೆದ ಉಪಹಾರ್ ಚಿತ್ರಮಂದಿರವು ಅನ್ಸಾಲ್ ಸಹೋದರರ ಒಡೆತನಕ್ಕೆ ಸೇರಿದೆ.
ವಿಚಾರಣಾ ನ್ಯಾಯಾಲಯವೊಂದು ಕಳೆದ ವರ್ಷ ನವೆಂಬರ್ 20ರಂದು ಅನ್ಸಾಲ್ ಸಹೋದರರು ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು.
ಹಿಂದಿ ಸಿನಿಮಾ ಬಾರ್ಡರ್ ಪ್ರದರ್ಶನವಾಗುತ್ತಿದ್ದ ವೇಳೆಗೆ ಚಿತ್ರಮಂದಿರದ ಟ್ರಾನ್ಸ್‌ಪಾರ್ಮರ್‌ನಲ್ಲಿ ಬೆಂಕಿ ಹತ್ತಿಕೊಂಡಿದ್ದು ಹೆಂಗಸರು ಮಕ್ಕಳು ಸೇರಿದಂತೆ 59 ಮಂದಿ ಉಸಿರುಕಟ್ಟಿ ಸಾವನ್ನಪ್ಪಿದ್ದರು. |