ಬಿಎಂಡಬ್ಲ್ಯೂ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ಐದು ವರ್ಷಗಳ ಕಾಲ ಶಿಕ್ಷೆ ಅನುಭವಿಸುತ್ತಿರುವ ಸಂಜೀವ್ ನಂದಾಗೆ ದೆಹಲಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ತನ್ನ 90ರ ಹರೆಯದ ತಾತನನ್ನು ಭೇಟಿಯಾಗಲು ನಂದಾಗೆ ನ್ಯಾಯಾಧೀಶ ಕೈಲಾಸ್ ಗಂಭೀರ್ ಅವರು ಅವಕಾಶ ನೀಡಿದ್ದು ಮೂರು ವಾರಗಳ ಜಾಮೀನು ನೀಡಿದ್ದಾರೆ. ಸಂಜೀವ್ ನಂದಾ ಮಾಜಿ ನೌಕಾಮುಖ್ಯಸ್ಥ ಎಸ್.ಎಮ್. ನಂದಾ ಅವರ ಮೊಮ್ಮಗ.
ಸಂಜೀವ್ ಪರ ವಕಾಲತ್ತು ನಡೆಸುತ್ತಿರುವ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು, ನಂದಾ ಅವರ ತಾತ ಎಸ್.ಎಮ್. ನಂದಾ ಅನಾರೋಗ್ಯ ಪೀಡಿತರಾಗಿದ್ದು, ನಂದಾ ಅವರ ಏಕೈಕ ಮೊಮ್ಮಗ ಎಂದು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡರು.
ಹಿರಿಯ ನಂದಾ ಅವರು ರಾಷ್ಟ್ರಕ್ಕೆ ನೀಡಿದ ಅಮೋಘ ಕೊಡುಗೆಯನ್ನೂ ಈ ಸಂದರ್ಭದಲ್ಲಿ ಜೇಠ್ಮಲಾನಿ ಪ್ರಸ್ತಾಪಿಸಿದರು. ತನ್ನ ಸ್ಮರಣೆ ಶಕ್ತಿಯನ್ನು ಕಳಕೊಂಡಿರುವ ಅವರು ನೆನಪಾದಗಲೆಲ್ಲ ತನ್ನ ಏಕೈಕ ಮೊಮ್ಮಗ ಸಂಜೀವ್‌ನನ್ನು ಜ್ಞಾಪಿಸಿಕೊಳ್ಳುತ್ತಾರೆ ಎಂದು ವಕೀಲರು ನುಡಿದರು.
ಶಸ್ತ್ರಾಸ್ತ್ರ ವ್ಯಾಪಾರಿ ಸುರೇಶ್ ನಂದಾ ಪುತ್ರನಾಗಿರುವ ಸಂಜೀವ್‌ನನ್ನು ಐದು ಮಂದಿಯ ಹತ್ಯಾ ಆರೋಪಕ್ಕೆ ಸಂಬಂಧಿಸಿದಂತೆ ದೋಷಿ ಎಂದು ನ್ಯಾಯಾಲಯ ತೀರ್ಮಾನಿಸಿ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ. 1999ರ ಜನವರಿ 10ರಂದು ದೆಹಲಿಯ ಲೋಧಿ ಕಾಲೋನಿಯಲ್ಲಿ ನಸುಕಿಗೂ ಮುಂಚಿತ ಅವಧಿಯಲ್ಲಿ ಸಂಜೀವ್ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರನ್ನು ಎರ್ರಾಬಿರ್ರಿಯಾಗಿ ಓಡಿಸಿದ ಕಾರಣ ಪೊಲೀಸೊಬ್ಬ ಸೇರಿದಂತೆ ರಸ್ತೆ ಬದಿ ಮಲಗಿದ್ದ ಆರು ಮಂದಿಯ ಸಾವನ್ನಪ್ಪಿದ್ದರು. |