ಮುಂಬೈಯಲ್ಲಿ ನವೆಂಬರ್ 26ರಂದು ಉಗ್ರರು ದಾಳಿ ನಡೆಸುವ ಗಂಟೆಗಳಿಗೆ ಮುಂಚಿತವಾಗಿ, ಹೋಟೇಲ್ ಒಬೇರಾಯ್‌ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಗದಿತ ಭೇಟಿಗೆ ಕೇಂದ್ರೀಯ ಗುಪ್ತಚರ ಇಲಾಖೆಗಳು ಭದ್ರತಾ ಅನುಮತಿ ನೀಡಿದ್ದವು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಜಯಂತ್ ಪಾಟೀಲ್ ಹೇಳಿದ್ದಾರೆ.
"ಪ್ರಧಾನಿಯವರ ನವೆಂಬರ್ 28ರ ಭೇಟಿಗೆ ಗುಪ್ತಚರ ಸಂಸ್ಥೆಗಳಾದ ಐಬಿ ಮತ್ತು ರಾ ನವೆಂಬರ್ 26ರ ಬೆಳಿಗ್ಗೆ ಅನುಮತಿ ನೀಡಿದ್ದವು ಎಂದು ಪಾಟೀಲ್ ಅವರು ಅನೌಪಚಾರಿಕ ಸಂವಾದ ಒಂದರವೇಳೆ ವರದಿಗಾರರಿಗೆ ತಿಳಿಸಿದ್ದಾರೆ. ಮುಂಬೈ ಮೇಲೆ ನಡೆಸಿದ ಮಾರಣಾಂತಿಕ ದಾಳಿಯ ವೇಳೆ ಒಬೆರಾಯ್‌ಗೂ ಸಹ ಉಗ್ರರು ದಾಳಿ ನಡೆಸಿದ್ದರು.
"ದಾಳಿ ನಡೆಯುವ ಕುರಿತು ಐಬಿ ಮತ್ತು ರಾ ಈ ಹಿಂದೆ ಎಚ್ಚರಿಕೆ ನೀಡಿದ್ದು ನಿಜವಾದರೂ ಇದು ನಿರ್ದಿಷ್ಟವಾಗಿರಲಿಲ್ಲ" ಎಂದು ಪಾಟೀಲ್ ಹೇಳಿದ್ದಾರೆ. "ಸಂಬಂಧಿತ ಅಧಿಕಾರಿಗಳಿಗೆ ಈ ಹಿಂದಿನ ಎಚ್ಚರಿಕೆಗಳ ಕುರಿತು ಅರಿವಿದ್ದಿರಲಿಕ್ಕಿಲ್ಲ" ಎಂದು ಪಾಟೀಲ್ ಅವರು ಪ್ರಧಾನಿಯರ ಭದ್ರತಾ ಅನುಮತಿ ಕುರಿತು ವಿಶ್ಲೇಷಿಸಿದ್ದಾರೆ.
ರಾ ಮತ್ತು ಐಬಿಗಳು ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಯ ಕೈಗೊಂಡಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಾಟೀಲ್ ಸರ್ಕಾರವು ಸೂಕ್ತ ಕ್ರಮ ಕೈಗೊಂಡಿದೆ. ಗುಪ್ತಚರ ಸಂಸ್ಥೆಗಳು ನೀಡಿರುವ ಎಚ್ಚರಿಕೆಗಳು ನಿರ್ದಿಷ್ಟವಾಗಿರದಿದ್ದರೂ, ಶಂಕಿತ ಪ್ರದೇಶಗಳಲ್ಲಿ ಕೂಂಬಿಂಗ್ ಮತ್ತು ಹುಡುಕಾಟ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದರು. |