ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ವೀರ ಅಧಿಕಾರಿಗಳಾದ ವಿಜಯ ಸಾಲಸ್ಕರ್ ಮತ್ತು ಅಶೋಕ್ ಕಾಮ್ಟೆ ಅವರನ್ನು 26/11 ಸಂದರ್ಭ ಕೊಂದಿರುವ ಪಾಕಿಸ್ತಾನಿ ಉಗ್ರರಿಗೆ ಅವರು ಯಾರೆಂಬುದು ತಿಳಿದಿರಲಾರದು. ಆದರೆ ಭಯೋತ್ಪಾದನಾ ನಿಗ್ರಹ ಪಡೆಯ ಈ ಹಿರಿಯ ಅಧಿಕಾರಿಗಳು ದೀರ್ಘ ಕಾಲದಿಂದ ಉಗ್ರಗಾಮಿಗಳ ಹಿಟ್ ಲಿಸ್ಟ್‌ನಲ್ಲಿದ್ದರು ಎಂಬುದು ಬೆಂಗಳೂರು ಹಾಗೂ ಅಹಮದಾಬಾದ್ ಸರಣಿ ಸ್ಫೋಟ ಸಂದರ್ಭ ಜಿಹಾದಿಗಳು ಕಳುಹಿಸಿದ್ದ ಇ-ಮೇಲ್‌ನಿಂದ ಶ್ರುತಪಟ್ಟಿದೆ.
ಲಷ್ಕರ್ ಇ- ತೋಯ್ಬಾದ ಸೂಚನೆಯ ಅನುಸಾರ ಕಳೆದೊಂದು ವರ್ಷದಲ್ಲಿ ದೇಶದ ವಿವಿಧೆಡೆ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಿದ್ದ ಇಂಡಿಯನ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯು ಆಗಸ್ಟ್ 23ರಂದು ಕಳುಹಿಸಿದ್ದ ಇ-ಮೇಲ್‌ನಲ್ಲಿ, ಕರ್ಕರೆ ತಮ್ಮ ಹಿಟ್ ಲಿಸ್ಟ್‌ನಲ್ಲಿದ್ದಾರೆ ಎಂಬುದನ್ನು ಉಲ್ಲೇಖಿಸಿತ್ತು.
ತಮ್ಮ ಬಳಗದ ಉಗ್ರರ ಬಂಧನವನ್ನು ಉಲ್ಲೇಖಿಸಿ ನಿಷೇಧಿತ ಸಿಮಿ ಸಂಘಟನೆಯ ಒಡೆದ ಭಾಗವಾಗಿರುವ ಇಂಡಿಯನ್ ಮುಜಾಹಿದೀನ್ ಈ ಪತ್ರದಲ್ಲಿ "ವಿಶೇಷವಾಗಿ ಹಿರಿಯ ಅಧಿಕಾರಿಗಳಾದ ಹೇಮಂತ್ ಕರ್ಕರೆ ಮತ್ತವರ ಮಿತ್ರರ ಮೇಲೆ ನಮ್ಮ ಆಕ್ರಮಣಕಾರರು ಈಗಾಗಲೇ ಸನ್ನದ್ಧರಾಗಿದ್ದಾರೆ ಎಂಬುದನ್ನು ತಿಳಿಸಲು ಬಯಸುತ್ತೇವೆ" ಎಂದು ತಿಳಿಸಿತ್ತು. ಈ ಎಚ್ಚರಿಕೆ ಸಂದೇಶ ಬಂದ ಮೂರೇ ತಿಂಗಳಲ್ಲಿ ಕರ್ಕರೆ, ಸಾಲಸ್ಕರ್ ಮತ್ತು ಕಾಮ್ಟೆ ಅವರು ಹತ್ಯೆಯಾಗಿದ್ದಾರೆ.
ಗುಜರಾತ್ ಪೊಲೀಸರು ಐಎಂ ಉಗ್ರಗಾಮಿಗಳನ್ನು ಬಂಧಿಸಿದ ಬಳಿಕ ಐಎಂ ಕಳುಹಿಸಿರುವ ಏಳು ಪುಟಗಳ ಇ-ಮೇಲ್‌ನಲ್ಲಿ, ಜಿಹಾದಿಗಳು ಮುಂದಿನ ದಾಳಿಯನ್ನು ಪೊಲೀಸರ ಕಣ್ಣೆದುರೇ ನಡೆಸಲಿದ್ದಾರೆ ಎಂದೂ ಎಚ್ಚರಿಸಲಾಗಿತ್ತು. ಇ-ಮೇಲ್‌ನಲ್ಲಿರುವ ಅಂಶದ ಪ್ರಕಾರ, "ಇನ್ಷಾ ಅಲ್ಲಾ, ನಾವು ನಿಮಗೆ ನೇರವಾಗಿಯೇ ಸವಾಲೊಡ್ಡುತ್ತಿದ್ದೇವೆ. ಮುಂದಿನ ದಾಳಿಗಳನ್ನು ನಿಮ್ಮ ಕಣ್ಣೆದುರಲ್ಲೇ, ನಿಮ್ಮ ಅತ್ಯಂತ ಎಚ್ಚರಿಕೆಯ ಹದ್ದಿನ ಕಣ್ಣಿನಡಿಯಲ್ಲೇ, ಮಾತ್ರವಲ್ಲ, ನೀವು ಗುಪ್ತ ಮಾಹಿತಿ ಪಡೆಯುವ ಐಬಿ (ಗುಪ್ತಚರ ಮಾಹಿತಿ ಮಂಡಳಿ) - ಇಗ್ನೋರೆನ್ಸ್ ಬ್ಯುರೋ (ನಿರ್ಲಕ್ಷಿಸುವ ಮಂಡಳಿ) ಉಪಸ್ಥಿತಿಯಲ್ಲೇ ನಡೆಸುತ್ತೇವೆ".
ಸೆಪ್ಟೆಂಬರ್ 13ರಂದು, ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟಿಸಿದ ದಿನ, ಮತ್ತಷ್ಟು ನೇರವಾದ ಬೆದರಿಕೆಯೊಂದು ಬಂದಿತ್ತು. ಸ್ಫೋಟಕ್ಕೆ ಕೆಲವೇ ನಿಮಿಷಗಳಿಗೆ ಮುನ್ನ ಮಾಧ್ಯಮಗಳಿಗೆ ಕಳುಹಿಸಿದ ಇ-ಮೇಲ್‌ನಲ್ಲಿ, ಜುಲೈ 26ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ನಂತರ ಮುಂಬಯಿ ಎಟಿಎಸ್ ನಡೆಸಿದ್ದ ದಾಳಿಗಳನ್ನು ಉಲ್ಲೇಖಿಸಲಾಗಿತ್ತು. "ಜುಲೈ 26ರ ಬಳಿಕ ಏನೆಲ್ಲಾ ನಡೆದಿದೆಯೋ, ಅವನ್ನೆಲ್ಲಾ ಗಣನೆಗೆ ತೆಗೆದುಕೊಂಡರೆ, ಮುಂಬಯಿ ಎಟಿಎಸ್ ನಮ್ಮ ಈ ಹಿಂದಿನ ಬೆದರಿಕೆಗಳಿಗೆ ಸೊಪ್ಪು ಹಾಕಿಲ್ಲ ಮತ್ತು ಅದು ಉದ್ದೇಶಪೂರ್ವಕವಾಗಿ ನಮ್ಮೊಂದಿಗೆ ಸಂಘರ್ಷಕ್ಕಿಳಿದಿದೆ ಎಂಬಂತೆ ತೋರುತ್ತಿದೆ" ಎಂದು ಬರೆಯಲಾಗಿತ್ತು. ಮುಂಬಯಿ ಅಂಧೇರಿಯ ಅನ್ಸಾರ್‌ನಗರ್ ಮತ್ತು ಮೋಗ್ರಾಪಾಡದಲ್ಲಿ ಎಟಿಎಸ್ ನಡೆಸಿದ ದಾಳಿಯ ಅರಿವು ನಮಗಿತ್ತು ಎಂದೂ ಐಎಂ ತಿಳಿಸಿತ್ತು.
ಆ ಇ-ಮೇಲ್‌ನಲ್ಲಿ ಇದ್ದ ಅಂಶ: "ಮುಂಬಯಿಯ ಎಲ್ಲಾ ಜನತೆಗೆ ಐಎಂ ಎಚ್ಚರಿಸುತ್ತಿದೆ. ನೀವು ಭವಿಷ್ಯದಲ್ಲಿ ಎದುರಿಸಬೇಕಾದ ಯಾವುದೇ ಮಾರಣಾಂತಿಕ ಆಕ್ರಮಣಗಳಿಗೆಲ್ಲಾ, ಕಾರಣಕರ್ತವಾಗುವವರೆಂದರೆ ಮುಂಬಯಿ ಎಟಿಎಸ್ ಮತ್ತು ಅದರ ಪೋಷಕರಾದ ವಿಲಾಸರಾವ್ ದೇಶಮುಖ್ (ಅಂದಿನ ಮುಖ್ಯಮಂತ್ರಿ) ಮತ್ತು ಆರ್.ಆರ್.ಪಾಟೀಲ್ (ಅಂದಿನ ಗೃಹಮಂತ್ರಿ). ನೀವು ಈಗಾಗಲೇ ನಮ್ಮ ಹಿಟ್ ಲಿಸ್ಟ್‌ನಲ್ಲಿದ್ದೀರಿ, ಈ ಬಾರಿ ಇದು ತೀರಾ ಗಂಭೀರ ಸಂಗತಿ"!.
ಜುಲೈ 26ರ ಸ್ಫೋಟದ ದಿನ ಕಳುಹಿಸಿದ ಇ-ಮೇಲ್ ಸಂದೇಶದಲ್ಲಿ, ಮುಂಬಯಿಯ ಕೆಲವೊಂದು ಮುಸ್ಲಿಂ ಜನರಿರುವ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಗಳ ವಿರುದ್ಧ ಪೊಲೀಸರಿಗೆ ಗಂಭೀರ ಪರಿಣಾಮದ ಎಚ್ಚರಿಕೆ ನೀಡಲಾಗಿತ್ತು.
ಉತ್ತರ ಪ್ರದೇಶ ನ್ಯಾಯಾಲಯ ಸಂಕೀರ್ಣದಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಸ್ಫೋಟ ಮತ್ತು ಅದಕ್ಕೂ ಹಿಂದೆ ಮೇ 13ರಂದು ಜೈಪುರದಲ್ಲಿ ನಡೆದ ಬಾಂಬ್ ಸ್ಫೋಟದ ಸಂದರ್ಭ ಕಳುಹಿಸಲಾಗಿತ್ತು ಇ-ಮೇಲ್‌ಗಳಲ್ಲಿಯೂ, ಮುಂಬಯಿ, ದೆಹಲಿ, ಕೋಲ್ಕತಾ ಮತ್ತು ಚೆನ್ನೈ ನಗರಗಳಿಗೆ ಎಚ್ಚರಿಕೆ ಸಂದೇಶ ನೀಡಲಾಗಿತ್ತು.
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್ ಲೆ.ಕ.ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಸ್ವಾಮಿ ದಯಾನಂದ ಪಾಂಡೆ ಅವರನ್ನು ಬಂಧಿಸಿರುವುದು ಬಿಜೆಪಿ, ಶಿವಸೇನೆ ಹಾಗೂ ಇತರ ಹಿಂದೂ ಪರ ಸಂಘಟನೆಗಳ ತೀವ್ರ ಟೀಕೆಗೆ ಗುರಿಯಾಗಿತ್ತು. ಅದೇ ರೀತಿ, 2006ರಲ್ಲಿ ಮಹಾರಾಷ್ಟ್ರದ ಬರೇಲ್ವಿ ಮಸೀದಿ ಮೇಲಿನ ದಾಳಿಗೆ ಸಂಬಂಧಿಸಿ ಎಂಟು ಮಂದಿ ಮುಸ್ಲಿಮರ ಮೇಲೆ ಚಾರ್ಜ್ ಶೀಟ್ ದಾಖಲಿಸಿರುವುದು ಕೂಡ ಅಷ್ಟೇ ಟೀಕೆಗೆ ಕಾರಣವಾಗಿತ್ತು. ಈ ನಡುವೆ, ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎ.ಆರ್.ಅಂತುಳೆ ಅವರು ಕರ್ಕರೆ ಸಾವಿನ ಹಿಂದೆ "ಏನೋ ಕೈವಾಡ" ಇದೆ ಎಂಬ ಹೇಳಿಕೆ ನೀಡಿ ಮತ್ತಷ್ಟು ವಿವಾದ ಸೃಷ್ಟಿಸಿರುವುದು ಇಲ್ಲಿ ಸ್ಮರಣಾರ್ಹ. |