ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಅವರು ಅಮೆರಿಕದ ಪ್ರಭಾವಿ ರಾಜಕಾರಣ ಮನೆತನದಲ್ಲೊಂದಾದ ಕ್ಲಿಂಟನ್‌ಗಳ ಪ್ರತಿಷ್ಠಾನಕ್ಕೆ ಕೋಟ್ಯಂತರ ರೂಪಾಯಿಗಳ ಭಾರೀ ದೇಣಿಗೆ ನೀಡಿ ಸುದ್ದಿಮಾಡಿದ್ದಾರೆ.ತನ್ನ ಆಸ್ತಿಯಲ್ಲಿ ಬಹುಪಾಲನ್ನು ಅವರು ಕ್ಲಿಂಟನ್ ಪ್ರತಿಷ್ಠಾನಕ್ಕೆ ನೀಡಿದ್ದಾರೆ. ಈ ಪತ್ರಿಷ್ಠಾನವು ಹವಾಮಾನ ಬದಲಾವಣೆಯಿಂದ ಹಿಡಿದು ಏಡ್ಸ್ ತಡೆಗಟ್ಟುವಿಕೆಯ ತನಕದ ಉದಾತ್ತ ಧ್ಯೇಯೋದ್ದೇಶಗಳನ್ನು ಹೊಂದಿದೆ. ಆದರೆ ಅವರ್ ಸಿಂಗ್ ಅವರ ಈ ಪರಿಯ ಕೊಡುಗೆಯು ಹಲವು ಹುಬ್ಬುಗಳನ್ನು ಏರಿಸಿದೆ.ಸಿಂಗ್ ಕೊಡುಗೆಯ ಮೊತ್ತ ಎಷ್ಟೆಂದು ನಿಖರವಾಗದೇ ಇದ್ದರೂ ಇದು 4.6 ಕೋಟಿಯಿಂದ 23 ಕೋಟಿ ತನಕದ ವರೆಗಿರಬಹುದು ಎಂದು ಹೇಳಲಾಗಿದೆ. ಅಂದರೆ ಅವರು ಒಟ್ಟಾರೆ ಆಸ್ತಿಯ ಶೇ.20ರಷ್ಟು ಮೊತ್ತವನ್ನು ದೇಣಿಗೆ ನೀಡಿದರೇ? ರಾಜ್ಯ ಸಭಾ ಸದಸ್ಯರಾಗಿರುವ ಅವರು ತನ್ನ ಆಸ್ತಿ 37 ಕೋಟಿ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಘೋಷಿಸಿಕೊಂಡಿದ್ದಾರೆ.ಈ ಕುರಿತು ಅವರನ್ನು ಕೇಳಲಾದ ಪ್ರಶ್ನೆಗೆ ವಿಚಲಿತರಾಗದ ಅವರು "ತಾನೇನು ಹೇಳಲಾರೆ ಮತ್ತು ನಾನು ಯಾವುದನ್ನೂ ನಿರಾಕರಿಸಲಾರೆ" ಎಂದು ಹೇಳಿದ್ದಾರೆ. ಅಲ್ಲದೆ, ತನ್ನ ಪರವಾಗಿ ಇನ್ಯಾರಾದರೂ ಈ ಪಾವತಿ ಮಾಡಿರಬಹುದು ಎಂದು ಹೇಳಿದ್ದಾರಾದರೂ ಯಾವುದೇ ವಿವರಣೆ ನೀಡಲು ನಿರಾಕರಿಸಿದ್ದಾರೆ.ಆದರೆ ಈ ಕುರಿತು ಭಾರತದ ಹೊರಗೂ ಚರ್ಚೆಗಳು ನಡೆಯುತ್ತಿದ್ದು, ಅಮೆರಿಕದ ದೈನಿಕ ನ್ಯೂಯಾರ್ಕ್ ಟೈಮ್ಸ್ ಅಮರ್ ಸಿಂಗ್ ಅವರ ಔದಾರ್ಯದ ಕುರಿತು ಪ್ರಸ್ತಾಪಿಸಿದೆ.ಭಾರತದ ರಾಜಕಾರಣಿಯಾಗಿರುವ ಸಿಂಗ್ ಒಂದು ಮಿಲಿಯ ಡಾಲರ್‌ನಿಂದ 5ಮಿಲಿಯ ಡಾಲರ್ ತನಕ ಕೊಡುಗೆ ನೀಡಿದ್ದಾರೆ ಎಂದು ಬರೆದಿರುವ ಪತ್ರಿಕೆ, ಸಿಂಗ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಅಣುಒಪ್ಪಂದದ ಕುರಿತು ಲಾಬಿ ನಡೆಸಲು ಅಮೆರಿಕಕ್ಕೆ ಭೇಟಿ ನೀಡಿದ್ದರು ಎಂದು ಹೇಳಿದೆ. "ಅವರು ಆ ವೇಳೆ ಹಿಲರಿ ಕ್ಲಿಂಟನ್ ಅವರನ್ನು ಭೇಟಿ ನೀಡಿದ್ದರು. ಹಿಲರಿ ಅವರು ಡೆಮಾಕ್ರೆಟಿಕ್ ಸದಸ್ಯರು ಒಪ್ಪಂದಕ್ಕೆ ಅಡ್ಡಿಯಾಗಲಾರರು ಎಂಬ ಭರವಸೆ ನೀಡಿದ್ದರು. ವಾರದ ನಂತರ ಕಾಂಗ್ರೆಸ್ ಅಣು ಒಪ್ಪಂದಕ್ಕೆ ಅನುಮತಿ ನೀಡಿತ್ತು" ಎಂದು ಪತ್ರಿಕೆ ಬರೆದಿದೆ. ಅಮರ್ ಸಿಂಗ್ ಅಲ್ಲದೆ, ಉದ್ಯಮಿಗಳಾದ ಲಕ್ಷ್ಮಿ ಮಿತ್ತಲ್ ಮತ್ತು ತುಳ್ಸಿ ತಂತಿ ಅವರೂ ಕ್ಲಿಂಟಲ್ ಪ್ರತಿಷ್ಠಾನಕ್ಕೆ ದೇಣಿಗೆ ನೀಡಿದ್ದಾರೆ. ಅವರು ಕೊಟ್ಟಿರುವ ಮೊತ್ತ ಎಷ್ಟು ಎಂದು ನಿಖರವಾಗಿ ತಿಳಿದಿಲ್ಲ. ಆದರೆ ಪ್ರತಿಷ್ಠಾನದ ವೆಬ್‌ಸೈಟ್ ಪ್ರಕಾರ ಒಟ್ಟು 1-5ಮಿಲಿಯನ್ ಡಾಲರ್ ಮೊತ್ತ ನೀಡಲಾಗಿದೆ.ಒಟ್ಟಾರೆಯಾಗಿ ಅಮರ್ ಸಿಂಗ್ ಅವರ ಈ ದೊಡ್ಡಮೊತ್ತದ ಕೊಡುಗೆ ಹಲವಾರು ಸಂಶಯಗಳಿಗೆ ನಾಂದಿ ಹಾಡಿದೆ. ಅಣು ಒಪ್ಪಂದಕ್ಕೂ ಈ ಕೊಡುಗೆಗೂ ಸಂಬಂಧ ಇದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.ಅಣುಒಪ್ಪಂದವನ್ನು ವಿರೋಧಿಸಿ ಎಡಪಕ್ಷಗಳು ಬೆಂಬಲ ಹಿಂತೆಗೆದಾಗ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಾಸ ಮತಯಾಚಿಸಿದ್ದ ವೇಳೆ ಆರೋಪಿಸಲಾಗಿದ್ದ ವೋಟಿಗಾಗಿ ನೋಟು ಪ್ರಕರಣದಲ್ಲೂ ಅಮರ್ ಸಿಂಗ್ ಅವರ ಹೆಸರು ಪ್ರಧಾನವಾಗಿ ಕೇಳಿ ಬಂದಿತ್ತು. ಆದರೆ ಇತ್ತೀಚೆಗೆ ಈ ಪ್ರಕರಣದ ತನಿಖೆ ನಡೆಸಿದ ಕಿಶೋರ್ ಚಂದ್ರ ನೇತೃತ್ವದ ಸಂಸತ್ಸಮಿತಿ ನೀಡಿರುವ ತನಿಖಾ ವರದಿಯಲ್ಲಿ ಅಮರ್ ಸಿಂಗ್‌ಗೆ ಕ್ಲೀನ್ ಚಿಟ್ ನೀಡಲಾಗಿದೆ.ಬಿಜೆಪಿಯ ಮೂವರು ಸಂಸದರು, ಸರ್ಕಾರದ ಪರವಾಗಿ ಮತಚಲಾಯಿಸುವಂತೆ ಅಥವಾ ಮತಚಲಾಯಿಸದೆ ತಟಸ್ಥವಾಗಿರುವಂತೆ ತಮಗೆ ಲಂಚ ನೀಡಲಾದ ಹಣ ಎಂದು ಸಂಸತ್ತಿನಲ್ಲಿ ನೋಟಿನ ಕಂತೆಗಳನ್ನು ಪ್ರದರ್ಶನ ಮಾಡಿ, ಅಮರ್ ಸಿಂಗ್ ವಿರುದ್ಧ ಆರೋಪಿಸಿದ್ದರು. |