ನವದೆಹಲಿ: ಮುಂಬೈದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧದ ಸಾಧ್ಯತೆಯನ್ನು ಭಾರತವು ತಳ್ಳಿಹಾಕಿದ್ದರೂ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅಥವಾ ಇನ್ಯಾವುದೇ ಭಾಗದಲ್ಲಿ ಭಾರತವು ಯಾವುದೇ ಸಮಯದಲ್ಲಿ ಮುಗಿಬೀಳಬಹುದು ಎಂದು ಅಂತಾರಾಷ್ಟ್ರೀಯ ಬೇಹುಗಾರಿಕಾ ಸಮುದಾಯವು ಭಾವಿಸಿದೆ.
ಪಾಕಿಸ್ತಾನದ ನೆಲೆಗಳ ಮೇಲೆ ಭಾರತೀಯ ಸೇನಾ ಕಾರ್ಯಾಚರಣೆಗೆ ಸನ್ನದ್ಧವಾಗಿದ್ದು, ಮುಂದುವರಿಯುವ ಸೂಚನೆಗಾಗಿ ಕಾಯುತ್ತಿದೆ ಎಂದು ಜಾಗತಿಕ ಬೇಹುಗಾರಿಕಾ ಸೇವಾ ಸಂಸ್ಥೆ ಸ್ಟ್ರಾಟ್‍ಫೋರ್ ಹೇಳಿದೆ.
ಭಾರತವು 2002ರಲ್ಲಿ ನಡೆಸಿದ ಆಪರೇಶನ್ ಪರಾಕ್ರಮ್ ಮಟ್ಟದಲ್ಲಿ ಕಾರ್ಯಾಚರಣೆ ನಡೆಸದೇ ಇದ್ದರೂ, ಅದು ಸರ್ವ ಸನ್ನದ್ಧವಾಗಿದೆ, ಪೂರ್ವ ಮತ್ತು ಪಶ್ಚಿಮ ಗಡಿಗಳಲ್ಲಿ ಭಾರತವು ಗಡಿ ಭದ್ರತಾ ಪಡೆ ಕಟ್ಟೆಚ್ಚರ ವಹಿಸುವಂತೆ ಮಾಡಿದ್ದು, ಅದರ ಮುಖ್ಯ ಉದ್ದೇಶ ಯಾವುದೇ ಅಕ್ರಮ ನುಸುಳುವಿಕೆಯನ್ನು ತಡೆಯುವುದಾಗಿದೆ ಎಂದು ಅದು ಹೇಳಿದೆ.
ಭಾರತವು ರಾಜತಾಂತ್ರಿಕ ಕ್ರಮಗಳನ್ನು ಅನುಸರಿಸುವ ಮೂಲಕ ಉಗ್ರವಾದದ ಸಮಸ್ಯೆಯನ್ನು ಹತ್ತಿಕ್ಕಲು ಪಾಕಿಸ್ತಾನಕ್ಕೆ ಅವಕಾಶ ನೀಡಲಿದೆ. ಆದರೆ, ಪಾಕಿಸ್ತಾನಕ್ಕೆ ಈ ಇಚ್ಚಾಶಕ್ತಿಯೂ ಇಲ್ಲ ಅಥವಾ ಸಾಮರ್ಥ್ಯವೂ ಇಲ್ಲ ಎಂಬುದು ಭಾರತಕ್ಕೆ ತಿಳಿದಿದೆ ಎಂದು ಸ್ಟ್ರಾಟ್‍ಫೋರ್ ತನ್ನ ವರದಿಯಲ್ಲಿ ಹೇಳಿದೆ. |