ಹೇಮಂತ್ ಕರ್ಕರೆ ಹೇಳಿಕೆ ಕುರಿತು ತಾನು ಹೇಳಿರುವುದರಲ್ಲಿ ತಪ್ಪೇನಿಲ್ಲ ಎಂದು ಸಾಧಿಸುತ್ತಾ ಮತ್ತು ವಾದಿಸುತ್ತಾ ಬಂದಿರುವ ಎ.ಆರ್. ಅಂತುಳೆಯ ಕುರಿತು ನಿರ್ಧಾರ ಒಂದನ್ನು ಕೈಗೊಳ್ಳಲು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂದಿಗ್ಧತೆಯಲ್ಲಿ ಬಿದ್ದಿದೆ.ಉಗ್ರರದಾಳಿಯ ವೇಳೆಗೆ ಕರ್ಕರೆ ಅವರು ಕಾಮಾ ಆಸ್ಪತ್ರೆಗೆ ಯಾಕೆ ತೆರಳಿದರು ಎಂಬ ಪ್ರಶ್ನೆ ಎತ್ತುವ ಮೂಲಕ ಕರ್ಕರೆ ಸಾವಿನ ತನಿಖೆ ನಡೆಸಬೇಕು ಎಂದು ಹೇಳಿರುವ ಅಂತುಳೆಯ ಕುರಿತು ನಿರ್ಧಾರವನ್ನು ಕೈಗೊಳ್ಳಲು ಕರೆದಿರುವ ಸಭೆ ಯವುದೇ ನಿರ್ಧಾರ ಕೈಗೊಳ್ಳದೆ ಅಂತಿಮಗೊಂಡಿತ್ತು. ಅಂತುಳೆ ಕುರಿತು ಸರ್ಕಾರವು ತನ್ನ ನಿರ್ಧಾರವನ್ನು ಸಂಸತ್ ಅಧಿವೇಶನ ಕೊನೆಗೊಳ್ಳುವ ಡಿಸೆಂಬರ್ 23ರಂದು ಸ್ಪಷ್ಟಪಡಿಸಬೇಕಿದೆ.ಪ್ರಧಾನಿಯವರ ನಿವಾಸದಲ್ಲಿ ನಡೆದ ಒಂದುಗಂಟೆಕಾಲದ ಸಭೆಯಲ್ಲಿ ಈ ವಿಚಾರದ ಒಳಿತು ಕೆಡುಕುಗಳ ಕುರಿತು ಚರ್ಚಿಸಲಾಯಿತಾದರೂ, ಅವರ ರಾಜೀನಾಮೆ ಸ್ವೀಕೃತವಾಗಿದೆಯೇ ಎಂಬ ಕುರಿತು ಯಾವುದೇ ಅಧಿಕೃತ ಶಬ್ದವಿನ್ನೂ ಹೊರಬಿದ್ದಿಲ್ಲ.ಅಂತುಳೆಯನ್ನು ರಾಷ್ಟ್ರವಿರೋಧಿ ಎಂದಿರುವ ವಿರೋಧಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದುಒತ್ತಾಯಿಸುತ್ತಾ ಬಂದಿದೆ. ದಿಗ್ವಿಜಯ ಸಿಂಗ್ ಬೆಂಬಲ ಏತನ್ಮಧ್ಯೆ, ಅಂತುಳೆ ಹೇಳಿಕೆಯಲ್ಲಿ ಆಕ್ಷೇಪಾರ್ಹವಾದುದು ಏನೂ ಇಲ್ಲ ಎಂದು ಹೇಳುವ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದಾರೆ." ಅಂತುಳೆಯ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ತನಿಖೆ ನಡೆಸಬೇಕು ಎಂದು ಹೇಳಿದ್ದು, ಅದು ಈಗಾಲೇ ಚಾಲ್ತಿಯಲ್ಲಿದೆ. ಅವರ ಹೇಳಿಕೆಯಲ್ಲಿ ಆಕ್ಷೇಪಾರ್ಹವಾದುದು ಏನಿದೆ" ಎಂದು ದಿಗ್ವಿಜಯ್ ಸಿಂಗ್ ವಾರಣಾಸಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.ಅಲ್ಲದೆ, ವಿಚಿತ್ರ ಹೇಳಿಕೆ ನೀಡುವ ಮೂಲಕ ಸುದ್ದಿಮಾಡಿರುವ ಅಂತುಳೆ ಶುಕ್ರವಾರದಂದು ಸಂಸತ್ ಪಕ್ಕದಲ್ಲಿರುವ ಮಸೀದಿಗೆ ಪ್ರಾರ್ಥನೆಗಾಗಿ ತೆರಳಿದ್ದ ವೇಳೆ ಅಲ್ಲಿ ಅವರಿಗೆ ನೀಡಿರುವ ಹೀರೋ ಮಾದರಿಯ ಸ್ವಾಗತವು ಅಂತುಳೆಗೆ ಅವರ ಸಮುದಾಯದಲ್ಲಿರುವ ಜನಬೆಂಬಲ ವ್ಯಕ್ತಪಡಿಸಿದೆ.ಈ ಎಲ್ಲದರ ಹಿನ್ನೆಲೆಯಲ್ಲಿ ಅಂತುಳೆ ಕುರಿತು ಸುಲಭ ನಿರ್ಧಾರ ಕೈಗೊಳ್ಳಲು ಆಗದ ಸ್ಥಿತಿಗೆ ಕಾಂಗ್ರೆಸ್ ಬಿದ್ದಿದೆ. |