ಗುವಾಹತಿ: ಅಸ್ಸಾಂನ ನಾಲ್ಕು ಹಕ್ಕಿಜ್ವರ ಪೀಡಿತ ಜಿಲ್ಲೆಗಳಲ್ಲಿ ಕೋಳಿಗಳ ವಧೆ ಕಾರ್ಯಾಚರಣೆ ಮುಂದುವರಿದಿದ್ದು, ಸುಮಾರು 4.25 ಲಕ್ಷ ಕೋಳಿಗಳನ್ನು ವಧಿಸಲಾಗಿದೆ.
ಏಳು ಜಿಲ್ಲೆಗಳ 120 ಗ್ರಾಮಗಳಲ್ಲಿ ಎಚ್5ಎನ್1 ವೈರಸ್ ಸೋಂಕು ತಗುಲಿದ್ದು, ಕೋಳಿ ಸಾಕಾಣಿಕೆ ರೈತರಿಗೆ 1,27,85,216 ರೂ.ಗಳನ್ನು ಪರಿಹಾರವಾಗಿ ವಿತರಿಸಿದ್ದಾರೆಂದು ಅಧಿಕೃತ ಮೂಲಗಳು ಹೇಳಿವೆ. ಇದೇ ರೀತಿಯ ಕಾಯಿಲೆ ಮುಂದೆ ತಲೆದೋರದಂತೆ ಸೂಕ್ತಕ್ರಮಗಳನ್ನು ಕೈಗೊಳ್ಳಲು ರಾಜ್ಯಸರ್ಕಾರ ತಜ್ಞರ ಸಮಿತಿಯೊಂದನ್ನು ನೇಮಿಸಲು ನಿರ್ಧರಿಸಿದೆ.
ರಾಜ್ಯ ಪಶುಸಂಗೋಪನೆ ಮತ್ತು ಪಶುವೈದ್ಯ ಇಲಾಖೆಯು ಜಿಲ್ಲಾಡಳಿತದ ಜತೆ ಸೋಂಕುಪೀಡಿತ ಜಿಲ್ಲೆಗಳಲ್ಲಿ ಸ್ವಚ್ಛತೆ ಕ್ರಮ ಮತ್ತು ಜಾಗೃತಿ ಅಭಿಯಾನವನನ್ನು ಆರಂಭಿಸಿದೆ. ಚಳಿಗಾಲದಲ್ಲಿ ವಲಸೆ ಬರುವ ಹಕ್ಕಿಗಳ ಬಗ್ಗೆ ನಿಗಾವಹಿಸುವಂತೆ ಕೂಡ ರಾಜ್ಯ ಅರಣ್ಯ ಇಲಾಖೆಯು ಅರಣ್ಯ ಸಿಬ್ಬಂದಿಗೆ ಸೂಚಿಸಿದೆ.
ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಕೂಡ ಹಕ್ಕಿಜ್ವರದ ಸೋಂಕು ಕಾಣಿಸಿಕೊಂಡಿದ್ದು, 20,000 ಕೋಳಿಗಳ ವಧೆ ಮಾಡಲಾಗಿದೆ.ಶುಕ್ರವಾರ ರಾತ್ರಿವರೆಗೆ ನರಹಟ್ಟಾ ಮತ್ತು ಕೋಟ್ವಾಲಿ ಗ್ರಾಮ ಪಂಚಾಯತ್‌ನ ವ್ಯಾಪ್ತಿಗೆ ಬರುವ 24 ಗ್ರಾಮಗಳಲ್ಲಿ 20,875 ಕೋಳಿಗಳ ವಧೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. |