ರಾಜಸ್ಥಾನದ ಗಡಿಯುದ್ದಕ್ಕೂ ಗಡಿಯಾಚೆಗಿನ ಸುರಂಗ ಮಾರ್ಗ ಇರುವ ಭದ್ರತಾ ಉಲ್ಲಂಘನೆಯ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಮಾರ್ಗವಾಗಿ ಮಾದಕ ದ್ರವ್ಯಗಳು ಮತ್ತು ನಕಲಿ ನೋಟುಗಳನ್ನು ಭಾರತದೊಳಕ್ಕೆ ಒಯ್ಯುತ್ತಿರುವಾಗ ಈ ಕಳ್ಳಮಾರ್ಗದ ಅಸ್ತಿತ್ವವು ಬೆಳಕಿಗೆ ಬಂದಿದೆ.
ಇಲಿಯಾಸ್ ಮತ್ತು ಎಕ್ಲು ಎಂಬಿಬ್ಬರು ಕಳ್ಳಸಾಗಣೆಕಾರರು ಈ ಆಘಾತಕಾರಿ ಅಂಶವನ್ನು ಗಡಿ ಭದ್ರತಾ ಪಡೆಗಳಿಗೆ ತಿಳಿಸಿದ್ದಾರೆ. ಈ ಸುರಂಗ ಮಾರ್ಗವನ್ನು ತೋರಿಸಲು ಬಂಧಿತರಿಬ್ಬರನ್ನು ಅಧಿಕಾರಿಗಳು ಬಾರ್ಮರ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಅಮನ್ ಕಾ ಪಾರ್ ಬಾರ್ಡರ್ ಔಟ್‍ಪೋಸ್ಟ್‌ಗೆ ಕರೆದೊಯ್ದಿದ್ದರು ಎಂದು ಮೂಲಗಳು ಹೇಳಿವೆ.
ಕತ್ತಲಾಗಿರುವ ಕಾರಣ ಈ ಸುರಂಗವನ್ನು ಪತ್ತೆಹಚ್ಚಲು ಅವರು ವಿಫಲವಾಗಿದ್ದಾರೆನ್ನಲಾಗಿದೆ. ಆದರೆ, ತಮ್ಮ ಪಾಕಿಸ್ತಾನದ ಸಂಪರ್ಕಗಳು ಮತ್ತು ಅವರಿಂದ ವ್ಯವಹಾರ ಪಡೆಯುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಸಲೀಂ ಎಂಬ ಪಾಕಿಸ್ತಾನಿ ಪ್ರಜೆ ತೀರಾ ಇತ್ತೀಚೆಗೆ ಅಂದರೆ ಡಿಸೆಂಬರ್ 2ರಂದು ಗಡಿ ಪ್ರದೇಶಕ್ಕೆ ಬಂದು ಸುರಂಗ ಮಾರ್ಗ ಬಳಸುವ ಮೂಲಕ ಈ ಇಬ್ಬರಿಗೆ ಹೆರಾಯಿನ್ ಸರಬರಾಜು ಮಾಡಿದ್ದಾನೆಂದು ಅಧಿಕೃತ ಮೂಲಗಳು ಹೇಳಿವೆ. ಸಲೀಂ ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳದೆ ಮರಳುವಲ್ಲಿ ಯಶಸ್ವಿಯಾಗಿದ್ದಾನೆ.
ಜೋಧ್‌ಪುರ ವಲಯದ ಐಜಿ ರಾಜೀವ್ ದಾಸೋತ್ ಅವರು ಹೇಳುವ ಪ್ರಕಾರ ಎರಡೂ ಕಡೆಗಳ ಕಳ್ಳಸಾಗಣೆದಾರರು ಜಂಟಿಯಾಗಿ ಯೋಜಿಸಿ ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದರು. ಈ ಸುರಂಗ ಮಾರ್ಗದ ಮೂಲಕ ಎಷ್ಟು ಸಮಯದಿಂದ ಈ ಅವ್ಯವಹಾರ ನಡೆಯುತ್ತಿದೆ ಎಂದು ತಿಳಿದು ಬಂದಿಲ್ಲ. ಜೈಸಲ್ಮಾರ್‌ನ ಜಮಾಲ್ ಖಾನ್ ಎಂಬಾತ ಈ ಕೃತ್ಯದ ರೂವಾರಿಯಾಗಿದ್ದು, ಈತ ಜೋಧ್‌ಪುರದಲ್ಲಿರುವ ತಾಂಜೀನಿಯನ್ನರಿಗೆ ಇವುಗಳನ್ನು ಇಲಿಯಾಸ್ ಮತ್ತು ಎಕ್ಲು ಮುಖಾಂತರ ಸರಬರಾಜು ಮಾಡುತ್ತಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ.
ಇತ್ತೀಚೆಗೆ ಬಂಧನಕ್ಕೀಡಾಗಿದ್ದ ತಾಂಜೇನಿಯಾದ ಮಾದಕವಸ್ತುಗಳ ಕಳ್ಳಸಾಗಣಿಕೆದಾರರಾದ ಆಡಂ ಗೋಡ್ವಿನ್, ಆಡಂ ಮೊಹಮ್ಮದ್ ಮತ್ತು ಉಮರ್ ಯೂಸುಫ್ ಅವರ ತನಿಖೆಯಿಂದ ಈ ವಿಚಾರಗಳು ಬಹಿರಂಗಗೊಂಡಿವೆ.
|