" ನಾವು ನೀಡಿರುವ ಪುರಾವೆಗಳ ಕುರಿತು ಕ್ರಮಕೈಗೊಳ್ಳಿ, ಅವರು ನಿಮ್ಮ ಪ್ರಜೆಗಳಾಗಿದ್ದರೂ, ದೇಶಭ್ರಷ್ಟರನ್ನು ಹಸ್ತಾಂತರಿಸುವ ಮೂಲಕ, ನಮ್ಮ ನೆಲವನ್ನು ಬಳಸಿಕೊಳ್ಳಲು ಭಯೋತ್ಪಾದಕರಿಗೆ ಆಸ್ಪದ ನೀಡುವುದಿಲ್ಲ ಎಂಬ ನಿಮ್ಮ ಮಾತನ್ನು ಉಳಿಸಿಕೊಳ್ಳಿ" ಎಂದು ಭಾರತವು ಪಾಕಿಸ್ತಾನಕ್ಕೆ ಹರಿತವಾಗಿ ಹೇಳಿದೆ.ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಿರಿಯ ಸಚಿವರು ಮತ್ತು ಸೇನಾಪಡೆಗಳ ಮುಖ್ಯಸ್ಥರ ಸಭೆಯ ಬಳಿಕ ಭಾರತ ಈ ಹೇಳಿಕೆಯನ್ನು ನೀಡಿದೆ." ಒಂದೆರಡು ಅಥವಾ ಮೂರು ಬಾರಿಯಲ್ಲ, ಸುಮಾರು 10 ಬಾರಿ ನಾವು ಪುರಾವೆಗಳನ್ನು ನೀಡಿದ್ದೇವೆ. ಪಾಕಿಸ್ತಾನ ಸಹಕರಿಸಬೇಕು. ಬರಿಯ ನಿರಾಕರಣೆಯಲ್ಲ. ನಿಮ್ಮ ನಿರಾಕರಣೆಯ ಕುರಿತು ನೀವು ಸಿಕ್ಕಿಬೀಳಲಿದ್ದೀರಿ" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಅವರು ಕೋಲ್ಕತಾದಲ್ಲಿ ಬೆಂಗಾಲ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತು ಹಾಲಿ ಅಧ್ಯಕ್ಷ ಅಸಿಫ್ ಆಲಿ ಜರ್ದಾರಿ ಅವರುಗಳು ವ್ಯಕ್ತಪಡಿಸಿರುವ ಬದ್ಧೆತೆಗಳಿಗೆ ಅನುಸಾರವಾಗಿ ಪಾಕಿಸ್ತಾನ ನಡೆದುಕೊಳ್ಳಬೇಕು ಎಂದು ಮುಖರ್ಜಿ ಹೇಳಿದ್ದಾರೆ." ತಮ್ಮ ರಾಷ್ಟ್ರದಲ್ಲಿ ಆಶ್ರಯ ಪಡೆದಿರುವ ದೇಶಭ್ರಷ್ಟರನ್ನು ಪಾಕಿಸ್ತಾನವು ಬಂಧಿಸಬೇಕು. ಭಾರತೀಯ ಪ್ರಜೆಗಳನ್ನು ನಮಗೆ ಒಪ್ಪಿಸಿ. ಅಲ್ಲದೆ ತನಿಖೆಗೆ ಅಗತ್ಯವಿರುವವರು ನಿಮ್ಮ ಪ್ರಜೆಗಳಾದರೂ ನಮಗೆ ಒಪ್ಪಿಸಿ" ಎಂದು ಪ್ರಣಬ್ ಪುನರುಚ್ಚರಿಸಿದ್ದಾರೆ.ಜೈಶೆ-ಇ-ಮೊಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ತನ್ನ ರಾಷ್ಟ್ರದಲ್ಲಿ ಇರುವ ಕುರಿತು ಪಾಕಿಸ್ತಾನ ವೈರುಧ್ಯ ಹೇಳಿಕೆಗಳನ್ನು ನೀಡಿರುವುದಕ್ಕೂ ಅವರು ಬಲವಾದ ಖಂಡನೆ ವ್ಯಕ್ತಪಡಿಸಿದರು." ಪಾಕಿಸ್ತಾನದ ರಕ್ಷಣಾ ಸಚಿವ ಚೌಧರಿ ಮುಕ್ತಾರ್ ಅಹ್ಮದ್ ಪ್ರಕಾರ ಮಸೂದ್ ಗೃಹ ಬಂಧನದಲ್ಲಿದ್ದಾನೆ. ಆದರೆ ಮತ್ತೊಮ್ಮೆ ನೀಡುವ ಹೇಳಿಕೆ ಪ್ರಕಾರ ಆತ ಕಾಣುತ್ತಿಲ್ಲ. ಇನ್ನೂ ಕೆಲವು ಹೇಳಿಕೆಗಳ ಪ್ರಕಾರ ಆತ ಪಾಕಿಸ್ತಾನದಲ್ಲೇ ಲಭ್ಯವಿಲ್ಲ" ಎಂಬ ಪಾಕಿಸ್ತಾನದ ವಿವಿಧ ಹೇಳಿಕೆಗಳನ್ನು ಸಚಿವರು ಉಲ್ಲೇಖಿಸಿದರು.ಪಾಕಿಸ್ತಾನದಿಂದ ಬರುವಂತ ಯಾವ ವಾದಗಳು ಮನವರಿಕೆಯಾಗುವಂತಿಲ್ಲ. ನಮ್ಮ ಬಳಿ ಪುರಾವೆಗಳಿವೆ. ಇದರಲ್ಲಿ ಸೆಟಲೈಟ್ ಫೋನ್ ಮುಖಾಂತರದ ಸಂಭಾಷಣೆಯೂ ಸೇರಿದೆ. ಈ ಸಂಭಾಷಣೆಗಳು ಆತಂಕಕಾರಿ ಎಂದು ತಾನು ನಿನ್ನೆಯಷ್ಚೆ ಹೇಳಿದ್ದೆ. ಸೆರೆಸಿಕ್ಕಿರುವ ಉಗ್ರ ಅಜ್ಮಲ್ ಅಮೀರ್ ಕಸಬ್ ನೀಡಿರುವ ಹೇಳಿಕೆಯೂ ಆತಂಕಕಾರಿಯಾಗಿದೆ. ಆತ ಹಾಗೂ ಆತನ ಹೊರಗಿನ ನಿಯಂತ್ರಕನ ನಡುವಿನ ಮಾತುಕತೆಗಳ ಕುರಿತು ಮಾಹಿತಿಯೂ ಇದೆ" ಎಂದು ಪ್ರಣಬ್ ಹೇಳಿದ್ದಾರೆ.ನಾವು ಕೊಟ್ಟಿರುವ ಪುರಾವೆಗಳನ್ನು ಗಮನಿಸಿ ಪಾಕಿಸ್ತಾನವು ಕ್ರಮಕೈಗೊಳ್ಳಬೇಕು. ಮಾತುಗಳು ಕೃತಿಗಿಳಿಯಬೇಕು ಎಂದು ಹೇಳಿದ ಅವರು ಭಾರತವು ಸಾಧ್ಯ ಇರುವ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿಸಿದೆ ಎಂದು ಮತ್ತೆ ಎಚ್ಚರಿಸಿದ್ದಾರೆ.ಸೂಕ್ತ ಉತ್ತರಕ್ಕೆ ಭಾರತ ಸಮರ್ಥ ಅದೇವೇಳೆ ಭಾನುವಾರ ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ "ಭಾರತವು ಸೂಕ್ತ ಉತ್ತರ ನೀಡುವಲ್ಲಿ ಸಮರ್ಥವಾಗಿದೆ" ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.ನಾವು ಸ್ನೇಹ ಹಸ್ತಚಾಚಿ ಶಾಂತಿ ಮಾತುಕತೆಗೆ ಮುಂದಾದರೂ ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದನೆಗೆ ಆಸ್ಪದ ನೀಡುತ್ತಿದೆ. ನಾವು ಇದಕ್ಕೆ ಸೂಕ್ತ ಉತ್ತರ ನೀಡಲು ಸಮರ್ಥವಾಗಿದ್ದೇವೆ. ನಮ್ಮ ಸಹೋದರತ್ವ, ಸ್ನೇಹಶೀಲತೆಯನ್ನು ಬಲಹೀನತೆ ಎಂದು ಪರಿಗಣಿಸಬಾರದು" ಎಂದು ಸೋನಿಯಾ ಆರ್.ಎಸ್.ಪುರದ ದಬ್ಲೇಹಾರ್‌ನಲ್ಲಿ ತಿಳಿಸಿದ್ದಾರೆ. |