ನವದೆಹಲಿ: ಭಾರತದಲ್ಲಿ ಲಷ್ಕರೆ-ಇ-ತೋಯ್ಬಾ ಸಂಘಟನೆಗೆ ಹಣ ಒದಗಿಸುವ ಸಬಾವುದ್ದೀನ್, ಮುಂಬೈ ದಾಳಿಯೋಜಕ ಫಾಹಿಮ್ ಅನ್ಸಾರಿಯೊಂದಿಗೆ, ಗಡಿಯಾಚೆಗಿಂದ ಭಯೋತ್ಪಾದನೆಯನ್ನು ಹೇಗೆ ಪ್ರಾಯೋಜಿಸಲಾಗುತ್ತಿದೆ ಎಂದು ಬಾಯಿಬಿಟ್ಟಿರುವುದಾಗಿ ಹೇಳಲಾಗಿದೆ.
ರಾಮ್‌ಪುರ ಸಿಆರ್‌ಪಿಎಫ್ ಶಿಬಿರದ ಮೇಲೆ ಕಳೆದ ಡಿಸೆಂಬರ್ 31ರಂದು ನಡೆಸಿರುವ ದಾಳಿಯ ಸಂಬಂಧ ಉತ್ತರ ಪ್ರದೇಶದ ಎಟಿಎಸ್‌ನಿಂದ ಬಂಧಿಸಲ್ಪಟ್ಟಿರುವ ಸಬಾವುದ್ದೀನ್ ಮುಂಬೈ ದಾಳಿಗೆ ಸಹಾಯ ಒದಗಿಸಿದ್ದಾನೆ ಎಂದು ಹೇಳಲಾಗಿದೆ. ಸಬಾವುದ್ದೀನ್ ಮುಂಬೈ ದಾಳಿಗಳ ಗುರಿಗಳನ್ನು ಗರುತಿಸಲು ಫಾಹಿಮ್‌ಗೆ ಸಹಾಯ ಮಾಡಿದ್ದಾನೆ ಎಂದು ಮೂಲಗಳು ಹೇಳಿವೆ.
ಮುಂಬೈ ದಾಳಿಯ ವೇಳೆ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ತರಬೇತಿ ಹೊಂದಿರುವ ಶಿಬಿರದಲ್ಲೇ ಅನ್ಸಾರಿಯೊಂದಿಗೆ ಸಬಾವುದ್ದೀನ್ ತರಬೇತಿ ಪಡೆದಿದ್ದಾನೆ. ಆತ ಲಷ್ಕರೆ ತರಬೇತಿ ಕೇಂದ್ರದಲ್ಲಿ ಝಾಕೀರ್ ಉರ್ ರೆಹ್ಮಾನ್ ಲಕ್ವಿಯನ್ನು ಭೇಟಿ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾನೆ. ಲಕ್ವಿ ಮುಂಬೈ ದಾಳಿಯ ರೂವಾರಿಯಾಗಿದ್ದಾನೆ.
ಅಲಿಘರ್ ವಿಶ್ವವಿದ್ಯಾನಿಲಯದ ಪಿಯುಸಿ ಡ್ರಾಪ್‌ಔಟ್ ಆಗಿರುವ ಸಬಾವುದ್ದೀನ್, ಗುಜರಾತ್ ದಾಳಿ ಈ ದಾಳಿಗಳಿಗೆ ಪ್ರಚೋದನೆ ಎಂದಿದ್ದಾನೆ. ಕಾಶ್ಮೀರದಲ್ಲಿ ಇಬ್ಬರು ಲಷ್ಕರೆ ಕಮಾಂಡರ್‌ಗಳ ಬಳಿ ತರಬೇತಿ ಪಡೆದ ಬಳಿಕ, 2003ರಲ್ಲಿ ಆತ ಪಾಕಿಸ್ತಾನಕ್ಕೆ ತೆರಳಿದ್ದು ಅಲ್ಲಿ ಲಷ್ಕರೆ ಕಾರ್ಯಾಚರಣೆಯ ಮುಖ್ಯಸ್ಥ ಯೂಸುಫ್ ಮುಜಾಮ್ಮಿಲ್‌ನನ್ನು ಭೇಟಿಯಾಗಿರುವುದಾಗಿ ಹೇಳಿದ್ದಾನೆನ್ನಲಾಗಿದೆ.
ನಕಲಿ ಪಾಸ್‌ಪೋರ್ಟ್ ಮೂಲಕ 2004ರಲ್ಲಿ ನೇಪಾಳದ ಮೂಲಕ ಭಾರತಕ್ಕೆ ಬಂದ ಸಬಾವುದ್ದೀನ್ ಬಳಿಕ ಬೆಂಗಳೂರಿನಲ್ಲಿ ನೆಲೆಯೂರಿದ್ದ. ಅಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಬಿಎ ಕೋರ್ಸಿಗೆ ಪ್ರವೇಶ ಪಡೆದಿದ್ದ ಈತ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ದಾಳಿ ನಡೆಸಿದ್ದ. ಈತನಿಗೆ ಇನ್ನೋರ್ವ ಲಷ್ಕರೆ ಕಾರ್ಯಕರ್ತ ಅಬು ಹಂಝಾ ಸಹಾಯ ನೀಡಿದ್ದ. ಈ ದಾಳಿಯಲ್ಲಿ ವಿಜ್ಞಾನಿಯೊಬ್ಬರು ಸಾವನ್ನಪ್ಪಿದರು. ಇದು ಸಬಾವುದ್ದೀನ್ ನಡೆಸಿದ ಮೊದಲ ಕಾರ್ಯಾಚರಣೆಯಾಗಿತ್ತು.
ಅಬುಹಂಝಾ 2005ರ ಡಿಸೆಂಬರ್ 28ರಂದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ದಾಳಿ ನಡೆಸಿದ ವೇಳೆ ಸಭಾಂಗಣದಲ್ಲಿ ಗುಂಡು ಹಾರಿಸಿ, ಗ್ರೆನೇಡುಗಳನ್ನು ಎಸೆದಿದ್ದ. ಇದಾದ ಬಳಿಕ ಈ ಇಬ್ಬರು ದೇಶ ತ್ಯಜಿಸಿದ್ದು ಮೂರು ದಿನಗಳೊಳಗೆ ಪಾಕಿಸ್ತಾನದಲ್ಲಿದ್ದರು ಎಂದು ಹೇಳಿದ್ದಾನೆಂದು ಮೂಲಗಳು ತಿಳಿಸಿವೆ. |