ಮುಂಬೈದಾಳಿಯಲ್ಲಿ ನಲುಗಿದವರು ನಮ್ಮ ಜನರಾಗಿರುವ ಕಾರಣ ಇದರ ಹಿಂದಿನ ಪಾತಕಿಗಳನ್ನು ಕಟಕಟೆಗೆ ತರಲು ಸಾಧ್ಯ ಇರುವ ಎಲ್ಲಾ ಆಯ್ಕೆಗಳಲ್ಲಿ ಭಾರತ ಮುಂದುವರಿಯಲಿದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.ಪಾಕ್ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ಹೆಡೆಮುರಿ ಕಟ್ಟಬೇಕೆಂಬ ಭಾರತದ ಬೇಡಿಕೆಯಿಂದ ನುಣುಚಿಕೊಳ್ಳಲು ಪಾಕಿಸ್ತಾನ ಲಾಗಹಾಕುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಮುಖರ್ಜಿ, ಪಾಕಿಸ್ತಾನವು ತನ್ನ ಬದ್ಧತೆಗಳು ಮತ್ತು ಭರವಸೆಗಳನ್ನು ಪೂರೈಸಬೇಕು ಎಂದು ಭಾರತವು ನಿರೀಕ್ಷಿಸುತ್ತಿದೆ ಎಂದು ನುಡಿದರು.ರಾಷ್ಟ್ರಗಳ ಸಮುದಾಯದ ಜವಾಬ್ದಾರಿಯುತ ಸದಸ್ಯವಾಗಿರುವ ಪಾಕಿಸ್ತಾನವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಖಾರವಾಗಿ ಅವರು ಹೇಳಿದ್ದಾರೆ.ಯುದ್ಧ ಸಂಭಾವ್ಯತೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇಂತಹ ಕಾರ್ಯವ್ಯೂಹಗಳನ್ನು ಮಾಧ್ಯಮಗಳ ಮೂಲಕ ಬಹಿರಂಗ ಪಡಿಸಲಾಗುವುದಿಲ್ಲ ಎಂದು ನುಡಿದರು. ಅವರು ಎರಡು ದಿನಗಳ ಭಾರತೀಯ ರಾಯಭಾರಿಗಳ ಸಮಾವೇಶದ ಉದ್ಘಾಟನಾ ಸಮಾರಂಭದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. |