ದೆಹಲಿಯ ಸಾವಿರಾರು ಭಿಕ್ಷುಕರಲ್ಲಿ ಕನಿಷ್ಠ ಪಕ್ಷ ನಾಲ್ಕು ಮಂದಿ ಸ್ನಾತಕೋತ್ತರ ಪದವೀಧರರು ಮತ್ತು ಆರು ಮಂದಿ ಸ್ನಾತಕ ಪದವಿ ಪಡೆದವರೆಂದು ರಾಜ್ಯಸಭೆಗೆ ಸೋಮವಾರ ತಿಳಿಸಲಾಯಿತು.
ದೆಹಲಿ ಸರಕಾರದ ನಿರ್ದೇಶನದಲ್ಲಿ ನಡೆದ ದೆಹಲಿ ವಿಶ್ವವಿದ್ಯಾಲಯದ ಸಮಾಜ ಸೇವಾ ಇಲಾಖೆಯು ನಡೆಸಿದಂತಹ 3,500 ಭಿಕ್ಷುಕರ ಸಮೀಕ್ಷೆಯಲ್ಲಿ, ನಾಲ್ಕು ಭಿಕ್ಷುಕರು ಪದವಿ ಪಡೆದಿದ್ದು, ಆರು ಮಂದಿ ತಮ್ಮ ಕಾಲೇಜು ಅಧ್ಯಯನವನ್ನು ಮುಗಿಸಿದ್ದಾರೆಂದು ತಿಳಿದುಬಂದಿದೆ. ಹೆಚ್ಚಿನವರು ದಿನಕ್ಕೆ 500 ರೂಪಾಯಿ ಸಂಪಾದಿಸುತ್ತಿರುವುದು ಅಚ್ಚರಿ ತಂದ ವಿಷಯ.
ವರದಿಯ ಪ್ರಕಾರ 22 ಭಿಕ್ಷುಕರು ದಿನಕ್ಕೆ 200ರಿಂದ 500 ರೂಪಾಯಿಯ ವರೆಗೆ ಸಂಪಾದಿಸುತ್ತಿದ್ದಾರೆ ಎಂದು ಸಾಮಾಜಿಕ ನ್ಯಾಯ ಇಲಾಖೆಯ ರಾಜ್ಯ ಸಚಿವೆ ಸುಬ್ಬುಲಕ್ಷ್ಮೀ ಜಗದೀಶನ್ ತಿಳಿಸಿದರು.
ಬೇರೆ ಬೇರೆ ಸ್ಥಳಗಳಿಂದ ಬೇರೆ ಬೇರೆ ಸಂದರ್ಭದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದೆಹಲಿಯ ಭಿಕ್ಷುಕರ ಸರಾಸರಿ ಸಂಖ್ಯೆಯು 58,570 ಆಗಿದೆ ಎಂದು ಸಚಿವರು ತಿಳಿಸಿದರು.
ಭಿಕ್ಷುಕರು ದೆಹಲಿಯ ಹೊರಗೆ ವಲಸೆ ಹೋಗುವುದು ಮತ್ತು ದೆಹಲಿಗೆ ಬರುತ್ತಿರುವುದರಿಂದ ನಿರ್ದಿಷ್ಟವಾದ ಸಮಯದಲ್ಲಿ ಯಥಾರ್ಥವಾದ ಭಿಕ್ಷುಕರ ಸಂಖ್ಯೆ ಸಮೀಕ್ಷೆ ಮಾಡುವುದು ಕಷ್ಟಕರ ಎಂದು ಅವರು ತಿಳಿಸಿದರು.
ಭಿಕ್ಷಾಟನೆ ತಡೆಗಾಗಿ ನಿಯಮಿತವಾಗಿ ಪೊಲೀಸ್ ದಾಳಿಗಳನ್ನು ನಡೆಸಲಾಗುತ್ತಿದೆ ಎಂದೂ ಅವರು ತಿಳಿಸಿದರು. |