ಜಮ್ಮು: ಜಮ್ಮು ಕಾಶ್ಮೀರ ಪೊಲೀಸರು ಜೈಶೆ-ಇ-ಮೊಹಮ್ಮದ್ ಸಂಘಟನೆಯ ಮೂರು ಫಿದಾಯಿನ್ (ಆತ್ಮಾಹುತಿ) ಕಾರ್ಯಕರ್ತರನ್ನು ಮಂಗಳವಾರ ಬಂಧಿಸಿದ್ದು, ಸಂಭಾವ್ಯ ದಾಳಿಯನ್ನು ತಪ್ಪಿಸಿದ್ದಾರೆ.
ಬಂಧಿತ ಉಗ್ರರೆಲ್ಲರೂ ಪಾಕಿಸ್ತಾನದವರಾಗಿದ್ದು, ಇವರಲ್ಲೊಬ್ಬ ಗುಲಾಂ ಫರೀದ್ ಎಂಬಾತ ಪಾಕಿಸ್ತಾನ ಸೈನಿಕ. ಈತ 2001ರಲ್ಲಿ ಪಾಕಿಸ್ತಾನದ ಪದಾತಿದಳಕ್ಕೆ ಸಿಪಾಯಿಯಾಗಿ ಸೇರಿದ್ದ.
ಆತನನ್ನು ಪಾಕಿಸ್ತಾನ ಸೇನೆಯಿಂದ ಜೈಶೆ ಸಂಘಟನೆಯು ಭಾರತದಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಆಯ್ಕೆ ಮಾಡಿಕೊಂಡಿತ್ತು. ಆದರೆ ಆತ ಇನ್ನೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಜಮ್ಮು ಡಿಜಿಪಿ ಕುಲ್‌ದೀಪ್ ಖೋಡಾ ಅವರು ಮೂವರು ಉಗ್ರರ ಬಂಧನವನ್ನು ದೃಢಪಡಿಸಿದ್ದು, ಇವರು ಜಮ್ಮುವಿನಲ್ಲಿ ನಡೆಯುವ ಚುನಾವಣೆ ವೇಳೆ ಅನಾಹುತ ಸೃಷ್ಟಿಸಲು ಯೋಜಿಸಿದ್ದರು ಎಂದು ಹೇಳಿದ್ದಾರೆ.
"ಈ ಮೂವರೂ ಪಾಕಿಗಳು ಮತ್ತು ಜೈಶೆ ಸಂಘಟನೆಗೆ ಸೇರಿದವರಾಗಿದ್ದು ಫಿದಾಯಿನ್ ದಾಳಿ ನಡೆಸಲು ನಿಯೋಜಿತರಾಗಿದ್ದರು. ತನ್ನನ್ನು ಲೋಡ್ ಮಾಡಿರುವ ವಾಹನವನ್ನು ಒಯ್ಯಲು ತರಬೇತುಗೊಳಿಸಲಾಗಿದೆ ಎಂದು ಒಬ್ಬಾತ ಹೇಳಿದ್ದಾನೆ" ಎಂದು ಖೋಡಾ ತಿಳಿಸಿದ್ದಾರೆ.
ಈ ಮೂವರು ಫಿದಾಯಿನ್‌ಗಳನ್ನೂ ಜೈಶೆ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ತಮ್ಮ ಮುಫ್ತಿ ಅಬ್ದುಲ್ ರವೂಫ್ ತರಬೇತುಗೊಳಿಸಿದ್ದಾನೆ ಎಂದು ಹೇಳಲಾಗಿದೆ.
ಪಾಕಿಸ್ತಾನದ ಸೇನೆಯ ಆಶ್ರಯದಲ್ಲಿ ಕರಾಚಿಯಲ್ಲಿ ಕಂಟೋನ್ಮೆಂಟ್ ಹೊರಗಡೆ ಜೈಶೆ ಶಿಬಿರವೊಂದು ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆರೆಸಿಕ್ಕಿರುವ ಉಗ್ರರು ಇವರು ಮುಫ್ತಿ ಅಬ್ದುಲ್ ರವೂಫ್‌ನೊಂದಿಗೆ ರಾವಲ್ಪಿಂಡಿಯಲ್ಲಿದ್ದರು. ಬಳಿಕ ಇಲ್ಲಿಂದ ಕರಾಚಿಗೆ ತೆರಳಿ, ಕರಾಚಿಯಿಂದ ಢಾಕಾಗೆ ವಿಮಾನದಲ್ಲಿ ಪ್ರಯಾಣಿಸಿದ್ದರು. ಪಶ್ಚಿಮ ಬಂಗಾಳದ ಮೂಲಕ ಭಾರತ ಪ್ರವೇಶಿಸಿದ್ದು, ಬಳಿಕ ಕೋಲ್ಕತಾದಿಂದ ರೈಲಿನಲ್ಲಿ ಜಮ್ಮು ತಲುಪಿದ್ದರು. ರೈಲ್ವೇ ನಿಲ್ದಾಣದ ಸಮೀಪದ ಹೋಟೇಲಿನಲ್ಲಿ ಉಳಿದಿದ್ದರು. ಬಳಿಕ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಜಮ್ಮುವಿನಲ್ಲಿ ಅವರು ಹೋಟೇಲ್ ಹಿಡಿದಿದ್ದರು.
ಯೋಜನೆಯ ಪ್ರಕಾರ ಇವರಿಗೆ ಮಾರ್ಗದರ್ಶನ ನೀಡಲು ಸ್ಥಳೀಯನೊಬ್ಬ ಕಾಶ್ಮೀರದಿಂದ ಬರಬೇಕಾಗಿದ್ದು, ಹಿಮಪಾತದಿಂದಾಗಿ ರಸ್ತೆಗಳು ತಡೆಯಲ್ಪಟ್ಟಿರುವ ಕಾರಣ ನಿಗದಿತ ಸಮಯಕ್ಕೆ ತಲುಪಲಾಗಿಲ್ಲ. ಸ್ಥಳೀಯ ಉಗ್ರರು ಇವರಿಗೆ ಸ್ಫೋಟಕಗಳನ್ನು ನೀಡಿ ದಾಳಿಯ ಗುರಿಗಳನ್ನು ತೋರಿಸಬೇಕಿತ್ತು.
ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ ಎರಡು ದಿನಗಳ ಅಂತರದಲ್ಲೇ ಈ ಉಗ್ರರು ಸೆರೆಸಿಕ್ಕಿದ್ದಾರೆ. ಮೊನ್ನೆ ಬಂಧನಕ್ಕೀಡಾದವರಲ್ಲಿ ಹರ್ಕತ್-ಉಲ್-ಜಿಹಾದಿ-ಇಸ್ಲಾಮಿಯ ಕಮಾಂಡರ್ ಸೇರಿದ್ದಾನೆ. ಇವರು ಜಮ್ಮು ರೈಲ್ವೇ ನಿಲ್ದಾಣದಲ್ಲಿ ಬಂಧನಕ್ಕೀಡಾಗಿದ್ದರು.
ಜಮ್ಮುನಿನಲ್ಲಿ ಬುಧವಾರ ಕೊನೆಯ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ. |