ಅತ್ಯಂತ ಬೇಕಾಗಿರುವ ಉಗ್ರರನ್ನು ಹಸ್ತಾಂತರಿಸಿ ಎಂದು ಸೋಮವಾರ ಪಾಕಿಸ್ತಾನಕ್ಕೆ ಮತ್ತೊಮ್ಮೆ ಹೇಳಿರುವ ಭಾರತ, ಯುದ್ಧೋನ್ಮಾದ ಸೃಸ್ಟಿಸುವುದನ್ನು ನಿಲ್ಲಿಸಿ ಎಂದು ತಾಕೀತು ಮಾಡಿದೆ.ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು, "ಯೂರೂ ಯುದ್ಧವನ್ನು ಇಚ್ಚಿಸುವುದಿಲ್ಲ. ಪಾಕಿಸ್ತಾನವು ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕು" ಎಂದು ಹೇಳಿದ್ದಾರೆ.ಪಾಕಿಸ್ತಾನವು ತನ್ನ ನೆಲದಲ್ಲಿರುವ ಭಯೋತ್ಪಾದನಾ ನೆಲೆಗಳನ್ನು ಪುಡಿಗೈಯಬೇಕು ಎಂದೂ ಪ್ರಧಾನಿ ಹೇಳಿದ್ದಾರೆ.ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರೂ ಪಾಕಿಸ್ತಾನಕ್ಕೆ ಮತ್ತೊಮ್ಮೆ ಬಲವಾದ ಸಂದೇಶ ನೀಡಿದ್ದು, ಯುದ್ಧದ ಉನ್ಮಾದ ಸೃಷ್ಟಿಸದೆ, ಮುಂಬೈ ದಾಳಿಗೆ ಜವಾಬ್ದಾರರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪುನರುಚ್ಚರಿಸಿದ್ದಾರೆ.ಪಾಕಿಸ್ತನಾದ ಸೇನಾ ಮುಖ್ಯಸ್ಥ ಜನರಲ್ ಅಶ್ಫಕ್ ಪರ್ವೇಜ್ ಖಯಾನಿ ಅವರು, ಪಾಕಿಸ್ತಾನದ ಮೇಲೆ ಭಾರತವು ದಾಳಿ ನಡೆಸಿದಲ್ಲಿ, ಪಾಕಿಸ್ತಾನ ನಿಮಿಷಗಳೊಳಗಾಗಿ ಪ್ರತಿದಾಳಿ ನಡೆಸಲಿದೆ ಎಂದು ಹೇಳಿಕೆ ನೀಡಿದ್ದಾರೆ ಮತ್ತು ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯವರನ್ನು ಭೇಟಿಯಾಗಿ ಕಾರ್ಯಾಚರಣೆಯ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ್ದಾರೆನ್ನಲಾಗಿದೆ.ಯಾವದೇ ಸಂದರ್ಭಕ್ಕೂ ಸಶಸ್ತ್ರ ಪಡೆಗಳು ಸನ್ನದ್ಧವಾಗಿದ್ದು, ಸೈನಿಕರು ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದಾರೆ ಎಂಬುದಾಗಿ ಖಯಾನಿ ಹೇಳಿದ್ದಾರೆಂದು ಪಾಕಿಸ್ತಾನಿ ಪತ್ರಿಕೆಯೊಂದು ವರದಿ ಮಾಡಿದೆ. |