ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆ ಸಾವಿನ ಬಗ್ಗೆ ಒಳಸಂಚು ತಾನು ಮಂಡಿಸಿದ ಸಿದ್ಧಾಂತವನ್ನು ಕೇಂದ್ರ ಸರಕಾರವು ತಿರಸ್ಕರಿಸಿದ ಬಳಿಕ ಸಂಸತ್ ಹೊರಗೆ ಕ್ರುದ್ಧರಾದಂತೆ ಕಂಡು ಬಂದ ಕೇಂದ್ರ ಸಚಿವ ಎ.ಆರ್.ಅಂತುಳೆ, ತನ್ನ ರಾಜೀನಾಮೆ ಬೇಕಿದ್ದರೆ, ನನ್ನ ಕಾಲು ಹಿಡಿಯಲಿ ಎಂದು ಸವಾಲು ಹಾಕಿದ್ದಾರೆ.
ಸಂಸತ್ ಹೊರಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಂತುಳೆ, ಈ ಕುರಿತು ವಿವಾದ ಕೊನೆಗೊಂಡಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂಬುದು ನನ್ನ ಆಗ್ರಹವಾಗಿತ್ತು. ಗೃಹ ಸಚಿವರು ಸಂಸತ್ತಿನಲ್ಲಿ ತನಿಖೆಯ ಆಧಾರದಲ್ಲೇ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರ ಸ್ಪಷ್ಟನೆ ಎಲ್ಲ ಶಂಕೆಗಳನ್ನು ನಿವಾರಿಸಿದೆ ಎಂದರು.
ಈ ಸಂದರ್ಭ, ಸಂಪುಟದಿಂದ ರಾಜೀನಾಮೆ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆಯಲ್ಲಾ ಎಂದು ಕೇಳಿದ ಪ್ರಶ್ನೆಗೆ, ಪ್ರತಿಪಕ್ಷಗಳು ನನ್ನ ಕಾಲು ಹಿಡಿದು ನನ್ನ ರಾಜೀನಾಮೆ ಕೇಳಬೇಕು ಇಲ್ಲವೇ ಪ್ರಧಾನಮಂತ್ರಿ ಕಾಲು ಹಿಡಿದು, ಅಂತುಳೆಯನ್ನು ಉಚ್ಚಾಟಿಸಲು ಕೋರಬೇಕು ಎಂದು ನುಡಿದರು. |