ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ವಿಧಾನ ಸಭೆಯ ಏಳನೆಯ ಮತ್ತು ಅಂತಿಮ ಹಂತದ ಮತದಾನವು ಬುಧವಾರ ಮಂಜಾನೆ ಆರಂಭಗೊಂಡಿದೆ. ಶ್ರೀನಗರದ ಎಂಟು ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು. ಪ್ರತ್ಯೇಖವಾದಿಗಳು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿರುವ ಕಾರಣ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ಇದೆ. ರಾಜ್ಯದ ಚಳಿಗಾಲದ ರಾಜಧಾನಿಯಾಗಿರುವ ಜಮ್ಮು ಮತ್ತು ಅದರ ಪಕ್ಕದ ಜಿಲ್ಲೆಯಾಗಿರುವ ಸಾಂಬಾದಲ್ಲಿ ಮತದಾನ ನಡೆಯುತ್ತಿದೆ. ಎಲ್ಲೆಡೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.ಇದ್ಗಾ, ಬಟ್‌ಮಾಲೂ, ಅಮಿರಾ ಕಡಲ್, ಹಬ್ಬ ಕಡಲ್, ಝದಿಬಲ್, ಸೋನಾವರ್, ಹಝ್ರತ್‌ಬಲ್ ಮತ್ತು ಖಾನ್ಯಾರ್‌ಗಳಲ್ಲಿ ಎಲ್ಲಾ ವಾಹನ ಚಾಲನೆಗಳನ್ನು ನಿಷೇಧಿಸಲಾಗಿದೆ. ಚುನಾವಣಾ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳ ವಾಹನಗಳು ಮಾತ್ರ ರಸ್ತೆಯಲ್ಲಿ ಓಡಾಡುತ್ತಿವೆ.ಪ್ರತ್ಯೇಖವಾದಿಗಳ ಜಂಟಿ ಸಮನ್ವಯ ಸಮಿತಿಯು ಸಂಪೂರ್ಣ ಚುನಾವಣಾ ಬಹಿಷ್ಕಾರಕ್ಕೆ ಮತ್ತು ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದೆ.ಯಾರೇ ಆಗಲಿ ಶಾಂತಿ ಮತ್ತು ಸುವ್ಯಸ್ಥಾ ಸಮಸ್ಯೆ ಸೃಷ್ಟಿಸಲು ಆಸ್ಪದ ನೀಡುವುದಿಲ್ಲ ಮತ್ತು ಶಾಂತಿಗೆ ಭಂಗ ಉಂಟುಮಾಡಿದವರ ವಿರುದ್ಧ ಕಾನೂನೀ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. |