ಸದ್ದು, ಗದ್ದಲ ಅಬ್ಬರ ಗಲಾಟೆಗಳ ನಡುವೆಯೇ ಸಂಸತ್ತಿನ ಚಳಿಗಾಲದ ಅಧಿವೇಶನಗದ ಕೊನೆಯ ದಿನವಾದ ಮಂಗಳವಾರ ಲೋಕಸಭೆಯಲ್ಲಿ ಕೇವಲ 17 ನಿಮಿಷಗಳಲ್ಲಿ ಯಾವುದೇ ಚರ್ಚೆ ಇಲ್ಲದೆ ಎಂಟು ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ.ಹೇಮಂತ್ ಕರ್ಕರೆ ಹೇಳಿಕೆ ಕುರಿತು ಅಲ್ಪಸಂಖ್ಯಾತ ಸಚಿವ ಎ.ಆರ್.ಅಂತುಳೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಸಂಸದರು ಸದನದ ಬಾವಿಗೆ ಧುಮುಕಿದರು. ಇದೇ ವೇಳೆಗೆ ಸಭಾಧ್ಯಕ್ಷರು ಬಾಕಿ ಉಳಿದಿದ್ದ ಮಸೂದೆಯನ್ನು ಕೈಗೆತ್ತಿಕೊಂಡರು. ಇತ್ತಕಡೆ ಗಲಾಟೆ ಗದ್ದಲಗಳು ನಡೆಯುತ್ತಿರುವಂತೆಯೇ ಮಸೂದೆಗಳು ಅಂಗೀಕಾರಗೊಂಡವು. ಸದನದಲ್ಲಿ ಹಾಜರಿದ್ದವರಿಗೆ ಯಾವ ಮಸೂದೆಗಳು ಶಾಸನಗಳಾಗಿವೆ ಎಂದೂ ಗೊತ್ತಾಗದ ಪರಿಸ್ಥಿತಿ. ಇಂತಹುದೇ ಪರಿಸ್ಥಿತಿಯಲ್ಲಿ ಸೋಮವಾರವೂ ನಾಲ್ಕು ಮಸೂದೆಗಳನ್ನು ಅಂಗೀಕರಿಸಲಾಯಿತು. ಈ ವೇಳೆಗೆ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಸ್ಥಾನದಲ್ಲಿರಲಿಲ್ಲ. ಉಪಸಭಾಪತಿ ಚರಣ್‌ಜಿತ್ ಅತ್ವಾಲ್ ಅವರು ಗದ್ದಲ ಗೌಜುಗಳಲ್ಲೇ ಮಸೂದೆಗಳನ್ನು ಅಂಗೀಕರಿಸಿದರು. |