ಅತಿಗಣ್ಯ ವ್ಯಕ್ತಿಗಳ ಭದ್ರತಾ ಉಸ್ತುವಾರಿಯನ್ನು ಹೊಸ ಸಂಸ್ಥೆಗೆ ವಹಿಸಬೇಕು ಎಂದು ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ಕೇಂದ್ರಕ್ಕೆ ಸಲಹೆ ಮಾಡಿದೆ.
ಈ ನಡುವೆ ಉದ್ದೇಶಿತ ರಾಷ್ಟ್ರೀಯ ತನಿಖಾ ಸಂಸ್ಥೆಯ ಹೊಣೆಯನ್ನು ಐಪಿಎಸ್ ಅಧಿಕಾರಿಗಳಿಗೇ ನೀಡಬೇಕು ಎಂದು ಗುಪ್ತಚರ ಹಾಗೂ ಭದ್ರತಾ ಸಂಸ್ಥೆಗಳು ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಹಾಗೂ ಘಟಕಗಳ ರಕ್ಷಣೆಗಾಗಿ ಸ್ಥಾಪಿಸಲಾಗಿರುವ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಮಾದರಿಯಲ್ಲಿ ವಿಐಪಿಗಳ ಭದ್ರತೆಗೂ ಹೊಸ ಸಂಸ್ಥೆ ರಚಿಸಬೇಕು. ಅಂತಹ ಸಂಸ್ಥೆಗಳು ವಿಐಪಿಗಳ ಭದ್ರತೆಗೆ ವಿಶೇಷ ಪರಿಣತಿ ಪಡೆಯಲು ಸಾಧ್ಯವಾಗುತ್ತದೆ. ವಿಐಪಿಗಳ ರಕ್ಷಣೆ ದೃಷ್ಟಿಯಿಂದಲೂ ಇಂಥ ಸಂಸ್ಥೆಗಳ ರಚನೆ ಅವಶ್ಯ ಎಂದು ಎನ್ಎಸ್‌ಜಿ ಮುಖ್ಯಸ್ಥ ಜೆ.ಕೆ.ದತ್ ಸಲಹೆ ನೀಡಿದ್ದಾರೆ.
ವಿಐಪಿ ಭದ್ರತೆಯನ್ನು ಪುನಾಪರಿಶೀಲಿಸಬೇಕಾದ ಕಾಲ ಬಂದಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. |