ಮಾಯಾವತಿಯ ಹುಟ್ಟುಹಬ್ಬ ನಿಧಿಗೆ ದೊಡ್ಡಮೊತ್ತದ ದೇಣಿಗೆ ನೀಡಲು ನಿರಾಕರಿಸಿರುವ ಕಾರಣಕ್ಕೆ, ಬಿಎಸ್‌ಪಿ ಶಾಸಕನೊಬ್ಬನ ಬೆಂಬಲಿಗರಿಂದ ಹಲ್ಲೆಗೀಡಾಗಿ ಅಸುನೀಗಿರುವ ಪಿಡಬ್ಲ್ಯೂಡಿ ಎಂಜಿನೀಯರ್ ಕುಟುಂಬಕ್ಕೆ ಘೋಷಿಸಿದ ಐದು ಲಕ್ಷ ರೂಪಾಯಿ ಪರಿಹಾರವನ್ನು ಅವರ ಕುಟುಂಬ ನಿರಾಕರಿಸಿದೆ.
ಪ್ರಕರಣದ ಕುರಿತಂತೆ ವಿಪಕ್ಷಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಆರೋಪಿ ಶಾಸಕ ಶೇಖರ್ ತಿವಾರಿ ಹಾಗೂ ಅವರ ಮೂವರು ಬೆಂಬಲಿಗರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಗೂ ಗೂಂಡಾಕಾಯ್ದೆಯನ್ನು ಹೇರಲಾಗಿದೆ. ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಎಂ.ಕೆ. ಗುಪ್ತಾ ಅವರನ್ನು ಬಡಿದು ಕೊಂದಿರುವ ಆರೋಪಗಳನ್ನು ಶಾಸಕ ತಿವಾರಿ ಹಾಗೂ ಅವರ ಬೆಂಬಲಿಗರು ಎದುರಿಸುತ್ತಿದ್ದಾರೆ.
ಪ್ರಕರಣದ ಕುರಿತು ದಾಖಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ತ್ಯಾಗಿ ಮತ್ತು ಭಾಟಿಯಾ ಎಂಬಿಬ್ಬರು ಮೃತ ಎಂಜಿನೀಯರ್ ಮೇಲೆ ಹಲ್ಲೆ ಮಾಡಿರುವುದಾಗಿ ಹೇಳಲಾಗಿದೆ. ಈ ಇಬ್ಬರು ಇನ್ನೂ ಬಂಧನಕ್ಕೀಡಾಗಿಲ್ಲ. ಪೊಲೀಸರು ಇವರ ಹುಡುಕಾಟ ಮುಂದುವರಿಸಿದ್ದಾರೆ.
ಮೃತ ಎಂಜೀನಿಯರ್ ಪುತ್ರ ಪ್ರತೀಕ್ ಪ್ರಾಂಜಲ್ ಅವರು ಸರ್ಕಾರ ನೀಡಲು ಮುಂದಾಗಿರುವ ಪರಿಹಾರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. "ನನ್ನ ತಂದೆಯ ಜೀವಕ್ಕೆ ನೀಡಲಾಗಿರುವ ದೇಣಿಗೆಯನ್ನು ಯಾವುದೇ ಕಾರಣಕ್ಕೆ ಸ್ವೀಕರಿಸಲಾರೆ" ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜೀನಿಯರ್ ಆಗಿರುವ ಪ್ರತೀಕ್ ಅವರು ತಂದೆಯ ಸಾವಿನ ಹಿನ್ನೆಲೆಯಲ್ಲಿ ಲಕೀಂಪುರಕ್ಕೆ ಆಗಮಿಸಿದ್ದಾರೆ. ಗುಪ್ತಾ ಅವರು ಬಿಎಸ್‌ಪಿ ಬೆಂಬಲಿಗರೆನ್ನಲಾಗಿರುವ ಗೂಂಡಾಗಳಿಂದ ಹತ್ಯೆಗೀಡಾಗಿದ್ದರು.
|