ಮುಂಬೈ: ಮುಂಬೈ ನರಮೇಧ ನಡೆಸಿರುವ ಭಯೋತ್ಪಾದಕರಲ್ಲಿ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್‌ನಿಗೆ ಜ.19ರ ತನಕ ಪೊಲೀಸ್ ವಶ ವಿಧಿಸಲಾಗಿದೆ. ಮಂಗಳವಾರ ಇಲ್ಲಿನ ಮ್ಯಾಜೆಸ್ಟ್ರೀಟ್ ಕೋರ್ಟ್ ಕಸಬ್‌ನನ್ನು ಪೊಲೀಸ್ ವಶಕ್ಕೆ ನೀಡಿದೆ.
ನವೆಂಬರ್ 26ರಂದು ನಡೆಸಿರುವ ದಾಳಿಯ ವೇಳೆ ಕಾಮಾ ಆಸ್ಪತ್ರೆಯಲ್ಲಿ ಗುಂಡು ಹಾರಾಟ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಮುಂಬೈನ ಅಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಮಲ್ ಪರ ವಾದಕ್ಕೆ ಇದುವರೆಗೆ ಯಾವುದೇ ವಕೀಲರು ಮುಂದಾಗಿಲ್ಲದ ಕಾರಣ ಆತನಿಗೆ ಕಾನೂನಿ ಪ್ರಾತಿನಿಧ್ಯವಿಲ್ಲ. ಭದ್ರತಾ ಕಾರಣದಿಂದ ಆತನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿಲ್ಲ.
ಪೊಲೀಸರು ಕಾಮಾ ಆಸ್ಪತ್ರೆಯಲ್ಲಿ ನಡೆದಿರುವ ಗುಂಡು ಹಾರಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಬೇಕಾಗಿದೆ ಎಂಬುದಾಗಿ ನ್ಯಾಯಾಲಯದಲ್ಲಿ ವಾದಿಸಿರುವುದಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಇ.ಬಿ.ಧಮಲ್ ತಿಳಿಸಿದ್ದಾರೆ.
ಕಾಮಾ ಆಸ್ಪತ್ರೆಯಲ್ಲಿ ಗುಂಡುಹಾರಾಟದಿಂದಾಗಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು ಏಳು ಮಂದಿ ಹತರಾಗಿದ್ದರು.
ಅಜ್ಮಲ್ ವಿರುದ್ಧ ಇನ್ನೂ ಮೂರು ಪ್ರಕರಣಗಳು ದಾಖಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. |