ಭಯೋತ್ಪಾದನೆಯನ್ನು ಮಟ್ಟಹಾಕಲು ಸುದೃಢ, ಕ್ಷಿಪ್ರ ಹಾಗೂ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಕೇಂದ್ರ ಗೃಹಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಆಂತರಿಕ ಭದ್ರತೆ ಕುರಿತು ನವದೆಹಲಿಯಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು ಉಗ್ರವಾದವನ್ನು ಮಟ್ಟಹಾಕುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ನುಡಿದರು.ಭಯೋತ್ಪಾದನೆಗೆ ಸಮನ್ವಯಿತ ಉತ್ತರ ಒಂದನ್ನು ಕಂಡುಕೊಳ್ಳಲು ಸಹಕರಿಸುವಂತೆ ಗೃಹಸಚಿವರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಕೋರಿದರು.
ಇತರ ಯಾವುದೇ ವಿಚಾರಗಳಿಗಿಂತ ಜನತೆಗೆ ಭದ್ರತೆ ಒದಗಿಸುವುದೇ ಪ್ರಮುಖ ಪರಿಗಣನೆಯಾಗಿದೆ ಎಂದು ಚಿದಂಬರಂ ಹೇಳಿದರು.
ಭಯೋತ್ಪಾದನಾ ದಾಳಿಗಳು ಹೆಚ್ಚುತ್ತಿರುವ ಮತ್ತು ಹೆಚ್ಚು ಸಂಕೀರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಉಗ್ರವಾದಿ ದಾಳಿಗಳನ್ನು ಎದುರಿಸಲು ಸಿದ್ಧತೆಯ ಮಟ್ಟವನ್ನು ಹೆಚ್ಚಿಸುವುದು ಮತ್ತು ಭಯೋತ್ಪಾದನಾ ಭೀತಿಗಳಿಗೆ ಉತ್ತರಿಸಲು ವೇಗ ಮತ್ತು ನಿರ್ಣಾಯಕತೆಯನ್ನು ಹೆಚ್ಚಿಸಬೇಕು ಎಂಬೆರಡ ಅಂಶಗಳನ್ನು ಅವರು ಪ್ರಮುಖ ಉದ್ದೇಶಗಳೆಂದು ಪಟ್ಟಿ ಮಾಡಿದ್ದಾರೆ.
ಇದಲ್ಲದೆ, ಸ್ಥಳೀಯ ಗುಪ್ತಚರ ಮಾಹಿತಿಗಳ ಮಹತ್ವವನ್ನು ಒತ್ತಿ ಹೇಳಿದ ಅವರು ಗುಪ್ತಚರ ಮಾಹಿತಿಯ ಉತ್ತಮ ಮೂಲವು ಸ್ಥಳೀಯ ಪೊಲೀಸರಲ್ಲಿದೆ ಎಂದು ನುಡಿದರು. ಗುಪ್ತಚರ ಮಾಹಿತಿಗಳು ರಾಷ್ಟ್ರದ ರಾಜಧಾನಿಗೆ ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಿಂದ ಹರಿದು ಬರಬೇಕು ಮತ್ತು ಅಂತೆಯೇ ಇಲ್ಲಿಂದ ಅತ್ತಕಡೆಗೆ ಹರಿದುಹೋಗಬೇಕಿದೆ ಎಂದು ನುಡಿದರು. |