ಸಂಸತ್ ಮತ್ತು ವಿಧಾನ ಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33 ಸ್ಥಾನಗಳ ಮೀಸಲಾತಿ ನೀಡುವ ಬಹುಚರ್ಚಿತ ಮಸೂದೆ, ಕೆಲವೇ ತಿಂಗಳಲ್ಲಿ ಅಂತ್ಯಗೊಳ್ಳಲಿರುವ ಪ್ರಸ್ತುತ ಲೋಕಸಭೆಯಲ್ಲೂ ಅಂಗೀಕಾರವಾಗುವ ಲಕ್ಷಣಗಳಿಲ್ಲ.
ಸಂಸದೀಯ ಸ್ಥಾಯಿ ಸಮಿತಿಯು ಮಹಿಳಾ ಮೀಸಲಾತಿ ಮಸೂದೆಯ ಪರಿಶೀಲನೆ ಕಾರ್ಯಕ್ಕೆ ಮತ್ತೆ ಕಾಲಾವಕಾಶ ವಿಸ್ತರಣೆ ಪಡೆಯುವ ಮೂಲಕ ಈ ಮಸೂದೆಯು ಅಂಗೀಕಾರವಾಗದು ಎಂಬ ಅಂಶ ಸ್ಪಷ್ಟವಾದಂತಾಗಿದೆ.
ಕಾಂಗ್ರೆಸ್‌ನ ಹಿರಿಯ ಸಂಸದ ಸುದರ್ಶನ ನಾಟ್ಚಿಯಪ್ಪನ್ ಅವರ ನೇತೃತ್ವದ ಸಮಿತಿಗೆ ಮುಂದಿನ ಅಧಿವೇಶನದ ಕೊನೆಯ ತನಕ ಕಾಲಾವಕಾಶ ನೀಡಾಗಿದೆ. ಈ ಲೋಕಸಭೆಯ ಕೊನೆಯ ಅಧಿವೇಶನ ಫೆಬ್ರವರಿಯಲ್ಲಿ ನಡೆಯಲಿದೆ.
ಮಹಿಳಾ ಮೀಸಲಾತಿ ಕುರಿತು ಉದ್ಭವವಾಗಿರುವ ಕೆಲವು ತಾಂತ್ರಿಕ ಅಂಶಗಳ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ಪರಿಶೀಲನೆಗಾಗಿ ಈ ಸಮಿತಿಗೆ ಮಸೂದೆಯನ್ನು ಶಿಫಾರಸ್ಸು ಮಾಡಲಾಗಿತ್ತು. ಸಮಿತಿಯು ನೇಮಕಗೊಂಡ ಬಳಿಕ ಇದೀಗಾಗಲೇ ಎರಡು ವಿಸ್ತರಣೆಯನ್ನು ಪಡೆದಿದೆ. ಕಳೆದ ಬಾರಿ ಡಿಸೆಂಬರ್ 23ರ ತನಕ ವಿಸ್ತರಣೆ ನೀಡಲಾಗಿತ್ತು. ಇದೀಗ ಮುಂದಿನ ಅಧಿವೇಶನದ ಕೊನೆಯ ತನಕ ಸಮಯಾವಕಾಶ ನೀಡಲಾಗಿದ್ದು, ಈ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದು ಎಂಬುದು ಸ್ಪಷ್ಟವಾದಂತಾಗಿದೆ.
ಸಮಿತಿಯು ವರದಿಯನ್ನು ಸಲ್ಲಿಸಲು ರಾಜ್ಯಸಭಾಧ್ಯಕ್ಷರು ಮುಂದಿನ ಅಧಿವೇಶನದ ಕೊನೆಯ ತನಕ ಸಮಯ ವಿಸ್ತರಣೆ ಮಾಡಿದ್ದಾರೆ ಎಂದು ರಾಜ್ಯಸಭಾ ಸಚಿವಾಲಯ ಹೇಳಿದೆ. |