ಉಗ್ರವಾದವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕೇಂದ್ರಸರಕಾರವು ಹುಟ್ಟುಹಾಕಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯು ಒಕ್ಕೂಟ ವ್ಯವಸ್ಥೆಗೆ ಏನೇನೂ ಸಾಲದು ಎಂದು ಹೇಳಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಇದು ನಮ್ಮ ರಾಷ್ಟ್ರೀಯ ವ್ಯವಸ್ಥೆಗೆ ವ್ಯತಿರಿಕ್ತವಾಗಿದ್ದು, ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ರಾಜ್ಯಗಳನ್ನು ಬದಿಗೊತ್ತುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ರಾಜ್ಯಗಳನ್ನು ಬದಿಗೆ ತಳ್ಳಿ ಇದೀಗ ಕೇಂದ್ರ ಸರ್ಕಾರ ತಾನೇ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಇಚ್ಚಿಸುತ್ತಿದೆ ಎಂದು ಅವರು ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡುತ್ತಾ ನುಡಿದರು. ಆದರೂ, ಕೇಂದ್ರ ಸರ್ಕಾರಕ್ಕೆ ಈ ಕುರಿತು ಯಶಸ್ಸನ್ನು ಹಾರೈಸುವುದಾಗಿಯೂ ಅವರು ನುಡಿದರು.
ಹೊಸ ಕಾನೂನಿನಡಿಯಲ್ಲಿ ಉಗ್ರರಿಗೆ ಜಾಮೀನು ಪಡೆಯುವ ಅವಕಾಶ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದಲ್ಲದೆ ಕಾನೂನು ಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ 1967ಕ್ಕೆ ಮಾಡಿರುವ ತಿದ್ದುಪಡಿಯು ಕಾಯ್ದೆಯನ್ನು ಬಲಗೊಳಿಸುವ ಬದಲಿಗೆ ಮತ್ತಷ್ಟು ದುರ್ಬಲವಾಗುವಂತೆ ಮಾಡಿದೆ ಎಂದೂ ಅವರು ಟೀಕಿಸದೆ ಬಿಡಲಿಲ್ಲ. ಪೋಟಾದಂತ ಕಾಯ್ದೆಯು ರಾಷ್ಟ್ರಕ್ಕೆ ಅವಶ್ಯಕವಾಗಿದೆ ಎಂದು ವಾದಿಸಿರುವವರಲ್ಲಿ ಅವರು ಮುಂಚೂಣಿಯಲ್ಲಿದ್ದರು.
ಮಾದರಿ ರಾಜ್ಯದ ಅಭಿವೃದ್ಧಿಗೆ ಒತ್ತಾಯ ಒಂದು ಸಣ್ಣ ರಾಜ್ಯವನ್ನು ಆಯ್ದುಕೊಂಡು ಇದನ್ನು ಭಯೋತ್ಪಾದನೆಯ ವಿರುದ್ಧ ಹೋರಾಟದ ಮಾದರಿ ರಾಜ್ಯವಾಗಿಸಿ ಉಗ್ರ ನಿಗ್ರ ಕಾರ್ಯ ಹಮ್ಮಿಕೊಳ್ಳಬೇಕು ಎಂದು ಅವರು ನುಡಿದರು.
ಈ ಮಾದರಿಯಲ್ಲಿ ಹವಾಲ, ಖೋಟಾನೋಟು, ಮಾದಕ ದ್ರವ್ಯಸಾಗಣೆ ಮತ್ತು ಹಾಗೂ ಸಂವಹನ ಸಾಮಾಗ್ರಿಗಳ ದುರ್ಬಳಕೆ ಸೇರಿದಂತೆ ಎಲ್ಲಾ ಚಟುವಟಿಕೆಗಳು ಒಳಗೊಂಡಿರಬೇಕು. ಇಂತಹ ರಾಜ್ಯದ ಮಾದರಿ ಕಾರ್ಯವು ಯಶಸ್ವಿಯಾದಲ್ಲಿ ಅದನ್ನು ಬಳಿಕ ಇತರ ರಾಜ್ಯಗಳಿಗೆ ವಿಸ್ತರಿಸಬೇಕು ಎಂದೂ ಅವರು ಸಲಹೆ ನೀಡಿದರು. |