ಉಗ್ರರು ನಮ್ಮವರಲ್ಲ ಎಂದು ಪಾಕಿಸ್ತಾನ ತಿಪ್ಪರಲಾಗ ಹೊಡೆಯುತ್ತಿದೆ. ಕಸಬ್ ಹೇಳಿಕೆಗಳು ಪೊಲೀಸರು ಬೆದರಿಕೆಯಿಂದ ನೀಡಿದ ಹೇಳಿಕೆ ಎಂದು ತಿಪ್ಪೆ ಸಾರಿಸಲು ಯತ್ನಿಸುತ್ತಿದೆ. ಆದರೆ, ಉಗ್ರರು ತಮ್ಮ ಲಷ್ಕರೆ ಬೋಧಕರೊಂದಿಗೆ ನಡೆಸಿದ ಸಂಭಾಷಣೆಯನ್ನು ತಯಾರು ಮಾಡಲು ಸಾಧ್ಯವೇ?
ಮುಂಬೈ ದಾಳಿ ನಡೆಸಿರುವ ಉಗ್ರರಿಗೆ ಯಾರನ್ನೂ ಒತ್ತೆಯಾಳುಗಳಾಗಿ ಇರಿಸಿಕೊಳ್ಳುವ ಉದ್ದೇಶ ಇರಲಿಲ್ಲ. ಬದಲಿಗೆ ಗರಿಷ್ಠ ಹಾನಿಯುಂಟುಮಾಡುವುದು ಅವರ ಉದ್ದೇಶವಾಗಿತ್ತು ಎಂಬುದು ಅವರ ಉಪಗ್ರಹ ದೂರವಾಣಿ ಸಂಭಾಷಣೆಯಿಂದ ಗೊತ್ತಾಗಿದೆ.
ದಾಳಿಕೋರರನ್ನು ಪಾಕಿಸ್ತಾನದಿಂದ ನಿಯಂತ್ರಿಸುತ್ತಿದ್ದ ವ್ಯಕ್ತಿ ಉಗ್ರರಿಗೆ ಸೆಲ್ ಫೋನ್ ಆನ್ ಮಾಡಿಡು, ಗುಂಡಿನ ಸದ್ದು ನಾನು ಕೇಳಿಸಿಕೊಳ್ಳುತ್ತೇನೆ ಎಂದಿದ್ದ. ಮುಂಬೈ ದಾಳಿಕೋರರು ತಮ್ಮ ಲಷ್ಕರೆ ಗುರುಗಳೊಂದಿಗೆ ನಡೆಸಿರುವ ಸಂಭಾಷಣೆಯ ಕೆಲವು ತುಣುಕುಗಳನ್ನು ನೋಡಿ.
ಪಾಕಿಸ್ತಾನ ನಿರ್ದೇಶಕ: ನಿಮ್ಮ ಹೋಟೇಲಿನಲ್ಲಿ ಮೂರು ಸಚಿವರು ಮತ್ತು ಒಬ್ಬ ಸಂಪುಟ ಕಾರ್ಯದರ್ಶಿ ಇದ್ದಾರೆ. ಯಾವ ಕೊಠಡಿ ಎಂದು ಗೊತ್ತಿಲ್ಲ. ಗಮನಿಸುತ್ತಿರಿ.
ಮುಂಬೈಯಲ್ಲಿದ್ದ ಉಗ್ರ: ಅಹಾ! ಇದು ಒಳ್ಳೆಯ ಸುದ್ದಿ.
ಪಾಕಿಸ್ತಾನ ನಿರ್ದೇಶಕ: ಈ ಮೂರು ಅಥವಾ ನಾಲ್ವರನ್ನು ಮುಗಿಸಿ. ಬಳಿಕ ನಿಮಗೇನು ಬೇಕು ಅದನ್ನು ಮಾಡಿ. ಮಂತ್ರಿಗಳು ಹೋಟೇಲಿನಲ್ಲಿದ್ದರೆ ಅವರು ತಪ್ಪಿಸಿಕೊಳ್ಳಬಾರದು.
ಮತ್ತೊಮ್ಮೆ ಪಾಕಿಸ್ತಾನದಿಂದ ಕರೆ ಮಾಡಿದ ಆತ, ನೌಕಾದಳ ಮತ್ತು ಪೊಲೀಸರು ಹೊರಗಡೆ ಜಮಾಯಿಸಿದ್ದಾರೆ. ಅವರತ್ತ ಒಂದು ಅಥವಾ ಎರಡು ಗ್ರೆನೇಡ್‌ಗಳನ್ನು ಎಸೆಯಿರಿ.
ತಾಜ್‍ನೊಳಗಿದ್ದ ಉಗ್ರ: ಕ್ಷಮಿಸಿ, ಎಲ್ಲಿದ್ದಾರೆ ನನಗೆ ತಿಳಿಯುತ್ತಿಲ್ಲ.
ದಾರಿಯಲ್ಲಿದ್ದ ವೇಳೆ ಉಗ್ರ: ನಾವೊಂದು ತಪ್ಪು ಮಾಡಿದ್ದೇವೆ.
ಪಾಕ್ ನಿರ್ದೇಶಕ: ಏನು ತಪ್ಪು
ಉಗ್ರ: ನಾವು ಬೋಟ್‌ಗೆ ಏರುವ ವೇಳೆಗೆ ಅಲೆಗಳ ಉಬ್ಬರ ಹೆಚ್ಚಿತ್ತು. ಇನ್ನೊಂದು ಬೋಟ್ ಬಂತು. ಅಷ್ಟರಲ್ಲಿ ಇದು ನೌಕಾ ದಳದ ಬೋಟೆಂದು ತಿಳಿದು ನಾವೆಲ್ಲ ತಕ್ಷಣ ಹಾರಿದೆವು. ಗೊಂದಲದಲ್ಲಿ ಇಸ್ಮಾಯಿಲ್‌ನ ಉಪಗ್ರಹ ಫೋನ್ ಅಲ್ಲೇ ಉಳಿಯಿತು.
ಉಗ್ರ: ನಮ್ಮ ಬಳಿ ಮೂವರು ವಿದೇಶಿಯರಿದ್ದಾರೆ. ಅವರಲ್ಲಿ ಇಬ್ಬರು ಸಿಂಗಪುರ ಮತ್ತು ಚೀನಾದ ಮಹಿಳೆಯರು.
ಪಾಕ್ ನಿರ್ದೇಶಕ: ಅವರನ್ನು ಕೊಂದು ಹಾಕಿ.
ಪಾಕ್‌ನಿಂದ ಉಗ್ರರ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದವರಿಗೆ ಮಾಧ್ಯಮಗಳ ವರದಿಗಳು ಅತ್ಯಂತ ಉಪಯುಕ್ತವಾಗಿದ್ದವು. ಎಲ್ಲವೂ ಮಾಧ್ಯಮಗಳಲ್ಲಿ ದಾಖಲಾಗುತ್ತಿದೆ. ಹೋರಾಡುತ್ತಲೇ ಇರಿ. ಗರಿಷ್ಠ ಹಾನಿ ಮಾಡಿ. ಯಾರನ್ನೂ ಜೀವಂತ ಉಳಿಸಬೇಡಿ.
ಪಾಕ್ ನಿರ್ದೇಶಕ (ಇನ್ನೊಂದು ಸಂಭಾಷಣೆ): ಸಹೋದರ ಅಬ್ದುಲ್ಲಾ, ನಿಮ್ಮ ಕಾರ್ಯವನ್ನು ಮಾಧ್ಯಮಗಳು 9/11ರ ಘಟನೆಗೆ ಹೋಲಿಸುತ್ತಿವೆ. ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಕೊಲ್ಲಲ್ಪಟ್ಟಿದ್ದಾರೆ.
ಅಬ್ದುಲ್ ರೆಹ್ಮಾನ್: ನಾವು 10-11ನೆ ಅಂತಸ್ತಿನಲ್ಲಿದ್ದೇವೆ. ನಮ್ಮ ಬಳಿ ಐದು ಒತ್ತೆಯಾಳುಗಳಿದ್ದಾರೆ.
ನಿರ್ದೇಶಕ: ಮುಸ್ಲಿಮರನ್ನು ಬಿಟ್ಟು ಎಲ್ಲರನ್ನು ಕೊಂದು ಹಾಕು.
|