ಪ್ರತಿಪಕ್ಷ ಆಡಳಿತವಿರುವ ರಾಜ್ಯಗಳು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಾಯ್ದೆ ಕುರಿತು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಕಾಯ್ದೆಯನ್ನು ಕೇಂದ್ರ ಮರು ಪರಿಶೀಲಿಸುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಆಂತರಿಕ ಭದ್ರತಾ ಕುರಿತ ಮುಖ್ಯಮಂತ್ರಿಗಳ ಸಭೆಯ ಮುಕ್ತಾಯದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಅಗತ್ಯ ಬಿದ್ದರೆ ತಾವು ಎನ್ಐಎ ಕಾಯ್ದೆಯನ್ನು ಮರುಪರಿಶೀಲಿಸಲಿದ್ದೇವೆ ಎಂದು ನುಡಿದರು.
ಸಭೆಯಲ್ಲಿ ಪಾಲ್ಗೊಂಡ ಎನ್‌ಡಿಎ ಆಡಳಿವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹೊಸ ರಾಷ್ಟ್ರೀಯ ತನಿಖಾ ಸಂಸ್ಥೆಯು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಆತಂಕ ವ್ಯಕ್ತಪಡಿಸಿದ್ದಾರೆ ಅಲ್ಲದೆ, ಹೊಸ ಭಯೋತ್ಪಾದನಾ ವಿರೋಧಿ ಕಾನೂನನ್ನು ರೂಪಿಸುವ ಮುನ್ನ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲ ರಾಜ್ಯಗಳು ಎನ್ಐಎ ಕುರಿತು ಆಕ್ಷೇಪ ವ್ಯಕ್ತಪಡಿಸಿರುವುದನ್ನು ಒಪ್ಪಿಕೊಂಡ ಚಿದಂಬರಂ, ಎನ್ಐಎ ಕಾಯ್ದೆಯ ಅಂಶಗಳನ್ನು ವಿವರಿಸಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿರುವುದಾಗಿ ಮತ್ತು ಏನಾದರೂ ಸ್ಪಷ್ಟೀಕರಣ ಬೇಕಾಗಿದ್ದರೆ ತಮಗೆ ವಾಪಸು ಪತ್ರ ಬರೆಯುವಂತೆ ಅವರಿಗೆ ಸೂಚಿಸಲಿರುವುದಾಗಿ ವರದಿಗಾರರಿಗೆ ತಿಳಿಸಿದ್ದಾರೆ.
|