ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್)ಯ ಗರಡಿಯಲ್ಲಿ ತಯಾರಾಗುವ ಓರ್ವ ವೈದ್ಯನ ವೆಚ್ಚ ಬರೋಬ್ಬರಿ ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳಂತೆ.
ಇದು ಎಐಐಎಂಎಸ್‌ನ ಆಸ್ಪತ್ರೆ ಆಡಳಿತ ವಿಭಾಗವು ಸಂಸ್ಥೆಯ ಡೀನ್‌ಗೆ ಇತ್ತೀಚೆಗೆ ಸಲ್ಲಿಸಲಾದ ಅಧ್ಯಯನ ವರದಿಯಲ್ಲಿ ನಮೂದಿಸಲಾಗಿರುವ ಅಂಶ. ಇದರಲ್ಲಿ ಐದೂವರೆ ವರ್ಷಗಳ ಕಾಲ ವೈದ್ಯವಿದ್ಯಾರ್ಥಿಯೊಬ್ಬನ ಕಲಿಕೆಯ ವೇಳೆ ಮಾಡಲಾಗುವ ಪ್ರತ್ಯಕ್ಷ ಮತ್ತು ಪರೋಕ್ಷ ವೆಚ್ಚ ಸೇರಿದೆ. ಪ್ರತ್ಯಕ್ಷ ವೆಚ್ಚದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹಾಗೂ ಶಿಕ್ಷಕರ ಸೇವಾ ವೆಚ್ಚ ಸೇರಿದ್ದರೆ, ಪರೋಕ್ಷ ವೆಚ್ಚದಲ್ಲಿ ಬೋಧಕೇತರ ಸಿಬ್ಬಂದಿಗಳು ಹಾಗೂ ಪೀಠೋಪಕರಣಗಳು ಹಾಗೂ ಇತರ ವೆಚ್ಚಗಳು ಸೇರಿವೆ.
ಎಐಐಎಂಎಸ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬನ ತರಬೇತಿ ವೆಚ್ಚ ನಿರ್ಣಯದ ಅಧ್ಯಯನವನ್ನು ಆಸ್ಪತ್ರೆ ಆಡಳಿತ ವಿಭಾಗದ ಮುಖ್ಯಸ್ಥ ಡಾ.ಶಕ್ತಿ ಗುಪ್ತಾ ಅವರ ಮೇಲ್ವಿಚಾರಣೆಯಲ್ಲಿ ನಡೆಸಲಾಗಿತ್ತು. ಪತ್ರಿವರ್ಷ, ಪ್ರತಿ ಕೋರ್ಸಿನ ಪ್ರತಿ ಪದವಿಪೂರ್ವ ವಿದ್ಯಾರ್ಥಿಯೊಬ್ಬನಿಗೆ ಎಐಐಎಂಎಸ್ 31.31 ಲಕ್ಷ ರೂಪಾಯಿ ವಿನಿಯೋಗಿಸುತ್ತಿದೆ ಎಂದು ಅಧ್ಯಯನ ಕಂಡುಕೊಂಡಿದೆ.
ಆದರೆ, ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಪದವಿಪಡೆಯುವ ವಿದ್ಯಾರ್ಥಿಗಳಲ್ಲಿ ಶೇ.53ರಷ್ಟು ಮಂದಿ ಉದ್ಯೋಗವನ್ನರಸಿ ವಿದೇಶಗಳಿಗೆ ತೆರಳುತ್ತಾರೆ ಎಂಬುದಾಗಿ ಈ ಹಿಂದಿನ ಮಾಧ್ಯಮ ಸಮೂಹ ಒಂದರ ವರದಿ ಹೇಳುತ್ತಿದೆ.
|