ಚೆನ್ನೈ: ಭಯೋತ್ಪಾದನೆ ಮತ್ತು ತೀವ್ರವಾದೀಯ ಪಡೆಗಳಿಗೆ ರಾಷ್ಟ್ರವನ್ನು ಅಸ್ಥಿರಗೊಳಿಸಲು ಅವಕಾಶ ನೀಡೆವು ಎಂದಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು, ಭಯೋತ್ಪಾದಕರಿಗೆ ಯಾವುದೇ ಸರಕ್ಷಿತ ತಾಣ ಇಲ್ಲವೆಂಬುದರ ಖಚಿತತೆಗಾಗಿ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ರಾಷ್ಟ್ರವು ಕಾರ್ಯನಿರ್ವಹಿಸಲಿದೆ ಎಂದು ನುಡಿದರು.
ಅವರು ಚೆನ್ನೈಯಲ್ಲಿ ಹಮ್ಮಿಕೊಳ್ಳಲಾಗಿರುವ ಎರಡುದಿನಗಳ ಪ್ರವಾಸಿ ಭಾರತೀಯ ದಿವಸವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. "ನಮ್ಮ ರಾಜ್ಯವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ನಾವು ಯಾವುದೇ ಭಯೋತ್ಪಾದಕ ಮತ್ತು ತೀವ್ರವಾದಿ ಪಡೆಗಳಿಗೆ ಅವಕಾಶ ನೀಡೆವು" ಎಂಬುದಾಗಿ ಪ್ರಧಾನಿ ನುಡಿದರು.
ಮುಂಬೈದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರೆ ಇ ತೋಯ್ಬಾ ಸಂಘಟನೆ ಇದೆ ಹಾಗೂ ಯಾವುದೇ ಸರಕಾರಿ ಪ್ರಾಯೋಜಿತ ಸಂಸ್ಥೆಗಳ ನೆರವಿಲ್ಲದೆ ಇಂತಹ ದಾಳಿಗಳನ್ನು ನಡೆಸಲು ಅಸಾಧ್ಯ ಎಂದು ಪಾಕಿಸ್ತಾನವನ್ನು ಮಂಗಳವಾರ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ದೂರಿದ್ದ ಪ್ರಧಾನಿಯವರು ಅದು ಉಗ್ರರ ಸ್ವರ್ಗೀಯ ತಾಣ ಎಂದು ಟೀಕಿಸಿದ್ದರು.
ಧರ್ಮದ ಹೆಸರಿನಿಂದ ರಾಷ್ಟ್ರದ ಜನತೆಯನ್ನು ಯಾವುದೇ ಪಡೆಗಳಿಗೆ ಒಡೆಯಲು ಸಾಧ್ಯವಿಲ್ಲ ಎಂದೂ ಅವರು ನುಡಿದರು.
ಇಸ್ರೇಲ್ ಗಾಜಾಪಟ್ಟಿಯ ಮೇಲೆ ನಡೆಸುತ್ತಿರುವ ದಾಳಿಯನ್ನು ಈ ಸಂದರ್ಭದಲ್ಲಿ ಖಂಡಿಸಿದ ಅವರು ಈ ಪ್ರದೇಶದಲ್ಲಿ ಶಾಂತಿ ಮತ್ತು ಸಹಜತೆ ಮರುಸ್ಥಾಪನೆಗೆ ಅಂತಾರಾಷ್ಟ್ರೀಯ ಸಮುದಾಯ ಒಟ್ಟಾಗಬೇಕು ಎಂದು ಒತ್ತಾಯಿಸಿದರು. |