ನವದೆಹಲಿ: ಬಿಜೆಪಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಶ್ನಾತೀತ ನಾಯಕರಾಗಿದ್ದಿರಬಹುದು. ಆದರೆ, ಲಾಲ್ ಕೃಷ್ಣ ಆಡ್ವಾಣಿಯವರ ಪ್ರಧಾನಿ ಹಾದಿ ಅಷ್ಟು ಸುಲಭವಿದ್ದಂತಿಲ್ಲ. ಬಿಜೆಪಿಯಲ್ಲಿ ನಾನೇ ಅತ್ಯಂತ ಹಿರಿಯ ನಾಯಕ ಎಂಬುದಾಗಿ ಹೇಳುತ್ತಾ ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಅವರು ಎದ್ದು ನಿಲ್ಲುವ ಮೂಲಕ ಆಡ್ವಾಣಿ ಹಾದಿಗೆ ಅಡ್ಡಿ ಸ್ಪಷ್ಟವಾದಂತಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನೂ ಸ್ಪರ್ಧಿಸಲಿದ್ದೇನೆ ಎಂದು ಹೇಳುವ ಮೂಲಕ, ಸಾಂವಿಧಾನಿಕ ಹುದ್ದೆ ಹೊಂದಿದವರು ಚುನಾವಣೆಯಲ್ಲಿ ಸ್ಫರ್ಧಿಸುವಂತಿಲ್ಲ ಎಂಬುದಾಗಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ, ಮಾಜಿ ಪ್ರಧಾನಿ ವಾಜಪೇಯಿ ಅವರ ಆರೋಗ್ಯ ಸುಧಾರಿಸಿದಲ್ಲಿ ಅವರೂ ಚುನಾವಣೆಯಲ್ಲಿ ಸ್ಫರ್ಧಿಸಬಹುದಾಗಿದೆ ಎಂದೂ ಹೇಳಿದ್ದಾರೆ.
"ಆಡ್ವಾಣಿ ಅವರು ಪ್ರಧಾನಿ ಅಭ್ಯರ್ಥಿ ಆಗಿರಬಹುದು. ಆದರೆ, ಇತರರೂ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಬಹುದಾಗಿದೆ. ಅವರು ಮಾತ್ರವೇ ಚುನಾವಣೆಯಲ್ಲಿ ಸ್ಫರ್ಧಿಸುವ ಅಭ್ಯರ್ಥಿಯಲ್ಲ" ಎಂದು ಅವರು ನುಡಿದರು. ಆಡ್ವಾಣಿ ಪ್ರಧಾನಿ ಅಭ್ಯರ್ಥಿ ಎಂಬ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಅವರು ಹೀಗೆ ಹೇಳಿದ್ದಾರೆ. "ಬಿಜೆಪಿಯಲ್ಲಿ ಆಡ್ವಾಣಿ, ರಾಜ್‌ನಾಥ್ ಸಿಂಗ್, ಮತ್ತು ಜಸ್ವಂತ್ ಸಿಂಗ್ ಅವರಂತಹ ಹಲವಾರು ಹಿರಿಯ ನಾಯಕರಿದ್ದಾರೆ. ಆದರೆ ವಯಸ್ಸನ್ನು ಪರಿಗಣಿಸಿದರೆ ನಾನು ಅತ್ಯಂತ ಹಿರಿಯ".
ತನ್ನ ಆರೋಗ್ಯ ಸುಧಾರಿಸಿದರೆ ಮತ್ತು ಜನತೆ ಬಯಸಿದರೆ ತಾನು ಚುನಾವಣೆಯಲ್ಲಿ ಸ್ಫರ್ಧಿಸುತ್ತೇನೆ ಎಂದು ಎಂದು ಶೇಖಾವತ್ ಸ್ಪಷ್ಟಪಡಿಸಿದ್ದಾರೆ.
ಆಡ್ವಾಣಿ ಅವರನ್ನು ಪ್ರಧಾನಿಯಾಗಿ ಬಿಂಬಿಸುವಲ್ಲಿ ಪಕ್ಷವು ತರಾತುರಿಯ ನಿರ್ಧಾರ ಕೈಗೊಂಡಿದೆಯೇ ಎಂದು ಕೇಳಲಾದ ಪ್ರಶ್ನೆಗೆ, ಈ ಕುರಿತು ನಿರ್ಧಾರ ಕೈಗೊಳ್ಳಲು ಪಕ್ಷವು ಮುಕ್ತವಾಗಿದೆ ಎಂದು ನುಡಿದರು. ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದಕ್ಕೆ ನೀವು ಆಡ್ವಾಣಿಯವರನ್ನು ಅಭಿನಿಂದಿಸಿರುವಿರೇ ಎಂದು ಕೇಳಿದಾಗ, ಅವರ ಆಯ್ಕೆಯಾಗಿರುವುದು ನನಗೆ ಗೊತ್ತೇ ಇರಲಿಲ್ಲ ಎಂಬ ಅಚ್ಚರಿಯ ಉತ್ತರ ನೀಡಿದರು.
|