ಪೂಂಛ್‌ನಲ್ಲಿ ಕಳೆದ ಎಂಟು ದಿನಗಳಿಂದ ಉಗ್ರರೊಂದಿಗೆ ನಡೆಯುತ್ತಿದ್ದ ಗುಂಡಿನ ಕಾಳಗವನ್ನು ಗುರುವಾರ ತಡರಾತ್ರಿ ಹಿಂತೆಗೆದುಕೊಳ್ಳಲಾಗಿದೆ. ಜಮ್ಮು ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಸಮೀಪ ಭಾಟಿ ದಾರ್ ಎಂಬಲ್ಲಿನ ದಟ್ಟಾರಣ್ಯದಲ್ಲಿ ಅವಿತಿದ್ದ ಉಗ್ರರನ್ನು ಮಟ್ಟ ಹಾಕಲು ಎಡೆಬಿಡದ ಕಾರ್ಯಾಚರಣೆ ನಡೆಸಲಾಗಿತ್ತು.
"ಕಾರ್ಯಾಚರಣೆ ಹಿಂತೆಗೆದುಕೊಳ್ಳಲಾಗಿದೆ. ಉಗ್ರರು ಇನ್ನೂ ಅಲ್ಲಿ ಅವಿತಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ" ಎಂದು ಸೇನಾವಕ್ತಾರ ಎಸ್.ಎನ್. ಆಚಾರ್ಯ ತಿಳಿಸಿದ್ದಾರೆ. ಜನವರಿ ಒಂದರಿಂದ ನಿರಂತರ ನಡೆದ ಈ ಕಾಳಗದಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದರೆ, ಓರ್ವ ಕಿರಿಯ ಅಧಿಕಾರಿ ಸೇರಿದಂತೆ ಮೂವರು ಭದ್ರಾತಾ ಪಡೆಗಳ ಸಿಬ್ಬಂದಿಗಳು ಸಾವನ್ನಪ್ಪಿದ್ದರು.
ಭಾ'f ಧಾರ್ ಅರಣ್ಯದಲ್ಲಿ ಉಗ್ರರ ನೆಲೆಯನ್ನು ಶೂನ್ಯಕ್ಕಿಳಿಸಲು ಸೇನಾ ಪಡೆಯು ಬೃಹತ್ ಕೂಂಬಿಂಗ್ ಕಾರ್ಯಾಚರಣೆಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಈ ಎನ್‌ಕೌಂಟರ್ ಕಾರ್ಯಾಚರಣೆಯನ್ನು ಹಿಂತೆಗೆಯಲಾಗಿದೆ ಎಂದು ಬ್ರಿಗೇಡಿಯರ್ ಗುರುದೀಪ್ ಸಿಂಗ್ ಹೇಳಿದ್ದಾರೆ.
ಉಗ್ರರು ಅಡಗಿಕೊಂಡಿರುವ ಜಾಗವನ್ನು ಸಂಪೂರ್ಣ ವಶಪಡಿಸಿಕೊಂಡು ಬಳಿಕ ಕಾರ್ಯಾಚರಣೆ ನಡೆಸುವುದಾಗಿ ಅವರು ನುಡಿದರು. ಪಡೆಗಳು ಉಗ್ರರು ಅಡಗಿರುವ ಗುಹೆಗಳತ್ತ ತಲುಪಿವೆ ಎಂದೂ ಅವರು ತಿಳಿಸಿದರು. ದಟ್ಟವಾದ ಅರಣ್ಯದಲ್ಲಿ ಮಂಜು ಮುಸುಕಿರುವ ಕಾರಣ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.
ಉಗ್ರರ ಅಡಗುತಾಣಗಳ ಮೇಲೆ ಭದ್ರತಾ ಪಡೆಗಳು ರಾಕೆಟ್ ಹಾಗೂ ಮಾರ್ಟರ್ ದಾಳಿಗಳನ್ನು ನಡೆಸಿದ್ದಾರೆ. ಉಗ್ರರು ಅಡಗಿದ್ದ ಜಾಗದಿಂದ ಪರಾರಿಯಾಗಲು ನಾವು ಅವಕಾಶ ನೀಡೆವು, ಅವರ ದೇಹವನ್ನು ವಶಪಡಿಸಿಕೊಂಡ ಬಳಿಕವಷ್ಟೆ ಕಾರ್ಯಾಚರಣೆ ನಿಲ್ಲಲಿದೆ ಎಂದು ಅವರು ನುಡಿದರು.
ಗುಹೆಗಳಲ್ಲಿ ಜೈಶೆ-ಇ-ಮೊಹಮ್ಮದ್ ಹಾಗೂ ಲಷ್ಕರೆ-ಇ-ತೋಯ್ಬಾಗಳ ಉನ್ನತ ಮಟ್ಟದ ಕಮಾಂಡರ್‌ಗಳು ಅವಿತುಕೊಂಡಿದ್ದಾರೆಂದು ಹೇಳಲಾಗಿದೆ. |