ಮುಂಬೈಯಲ್ಲಿ ನರಮೇಧ ನಡೆಸಿರುವ ಪಾಪಿಗಳು ಕಾಮಾ ಮತ್ತು ಅಲ್‌ಬ್ಲೆಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಅನಾಹುತಗಳನ್ನು ನಡೆಸದೇ ಇರುವುದಕ್ಕೆ ಅಲ್ಲಿ ಬುರ್ಖಾಗಳು ಮತ್ತು ಮುಸ್ಲಿಂ ಮಕ್ಕಳು ಕಂಡು ಬಂದದ್ದು ಕಾರಣವೇ? ಹೌದು ಅಂದಿದ್ದಾನಂತೆ ಸೆರೆಯಲ್ಲಿರುವ ಉಗ್ರ ಅಜ್ಮಲ್ ಅಮೀರ್ ಕಸಬ್.ಮುಂಬೈಯಲ್ಲಿ ವಿಧ್ವಂಸಕಾರಿ ಕೃತ್ಯವನ್ನು ನಡೆಸಲು ಹಡಗೇರಿ ಪಾಕಿಸ್ತಾನದಿಂದ ಬಂದ 10 ಉಗ್ರರನ್ನು ತರಬೇತುಗೊಳಿಸಿದವರು ಅವರಿಗೆ ಸ್ಪಷ್ಟವಾದ ಸೂಚನೆ ನೀಡಿದ್ದರು. ಅದೆಂದರೆ, "ಮುಸ್ಲಿಮರಿಗೆ ಹಾನಿಯಾಗದಂತೆ ನೋಡಿಕೊಳ್ಳಿ, ಮಿಕ್ಕವರನ್ನು ಹೊಡೆದು ಹಾಕಿ". ಹಾಗಾಗಿ ಕಾಮಾ ಮತ್ತು ಅಲ್‌ಬ್ಲೆಸ್ ಆಸ್ಪತ್ರೆಗಳಲ್ಲಿ ಅಧಿಕ ಸಂಖ್ಯೆಯ ಬುರ್ಖಾಗಳನ್ನು ಕಂಡಿದ್ದೇ, ಕಸಬ್ ಮತ್ತು ಆತನ ಸಹಚರನಾಗಿದ್ದ ಇಸ್ಮಾಯಿಲ್ ಖಾನ್ ಇಲ್ಲಿಂದ ಬಹುಬೇಗ ಜಾಗ ಖಾಲಿಮಾಡಿದ್ದರು.ಛತ್ರಪತಿ ರೈಲ್ವೇ ನಿಲ್ದಾಣದಿಂದ ಕಾಲ್ನಡಿಗೆಯ ದೂರದಲ್ಲಿರುವ ಈ ಆಸ್ಪತ್ರೆಗೆ ಸುತ್ತಮುತ್ತಲಿನ ಪ್ರದೇಶಗಳಿಂದ ಕೆಳಮಧ್ಯಮ ವರ್ಗದ ಮುಸ್ಲಿಂ ರೋಗಿಗಳು ಬರುತ್ತಾರೆ. ಬೆಂಡಿ ಬಜಾರ್, ಮೊಹಮ್ಮದ್ ಅಲಿ ರಸ್ತೆ, ಡೊಂಗ್ರಿ, ಪೈಧೋನಿ, ಬೈಕುಳ, ಸೇವ್ರಿ, ವಡಾಲ ಮುಂತಾದ ಪ್ರದೇಶಗಳ ಜನರು ಚಿಕಿತ್ಸೆಗಾಗಿ ಇಲ್ಲಿಗೆ ಆಗಮಿಸುತ್ತಾರೆ.ಪಾಕಿಸ್ತಾನದಿಂದ ಇವರನ್ನು ಸಿದ್ಧಪಡಿಸಿ ಕಳುಹಿಸಿದವರು ನಿಮ್ಮ ಗುರಿಗಳ ಎತ್ತರದ ಪ್ರದೇಶಕ್ಕೆ ಏರಿ ಸಾಧ್ಯವಿರುವಷ್ಟು ಗರಿಷ್ಠ ಹಾನಿಗೊಳಿಸುವಂತೆ ತಿಳಿಸಿದ್ದರು ಎಂದು ಬಂಧಿತ ಉಗ್ರ ಕಸಬ್ ತನಿಖೆವೇಳೆಗೆ ಹೇಳಿದ್ದಾನೆ. ಸಿಎಸ್‌ಟಿ ರೈಲ್ವೇ ನಿಲ್ದಾಣದಲ್ಲಿ, ನಿಲ್ದಾಣದ ಕಚೇರಿಗೆ ತೆರಳುವ ಪ್ರಯತ್ನವನ್ನು ರೈಲ್ವೇ ಪೊಲೀಸರು ವಿಫಲಗೊಳಿಸಿದ ಬಳಿಕ ಈ ಇಬ್ಬರು ಸನಿಹದಲ್ಲಿದ್ದ ಕಾಮಾ ಆಸ್ಪತ್ರೆಗೆ ಹಿಂದಿನ ಬಾಗಿಲಿಂದ ಪ್ರವೇಶಿಸಿದ್ದರು. ಕಾಮಾ ಆಸ್ಪತ್ರೆಯಲ್ಲಿ ಹೆಚ್ಚುವರಿ ಆಯುಕ್ತ ಸದಾನಂದ ದಾತೆ ನೇತೃತ್ವದ ಪೊಲೀಸ್ ಪಡೆಯೊಂದಿಗೆ ಮುಖಾಮುಖಿಯಾಗಿದ್ದರು. ಆಸ್ಪತ್ರೆಯ ತಾರಸಿ ಮೇಲೆ 45 ನಿಮಿಷಗಳ ಕಾಲವಿದ್ದ ಇವರ ಗ್ರೇನೇಡುಗಳನ್ನು ಎಸೆದಿದ್ದು, ಈ ವೇಳೆ ಇಬ್ಬರು ಪೊಲೀಸರು ಹತರಾಗಿದ್ದರು. ದಾತೆ ಮತ್ತು ಇತರ ಹಲವರು ಗಾಯಗೊಂಡಿದ್ದಾರೆ.ಕಾಮಾ ಆಸ್ಪತ್ರೆಯಿಂದ ಹೊರಟ ಅವರು ರಂಗ್ ಭವನ್ ಪಕ್ಕ ಪೊದೆಗಳಲ್ಲಿ ಅಡಗಿ ಕುಳಿತು ಪೊಲೀಸ್ ಜೀಪಿನತ್ತ ಗುಂಡು ಹಾರಿಸಿದ್ದರು. ಈ ವೇಳೆ ಹೇಮಂತ್ ಕರ್ಕರೆ, ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದರು. |