ಲೋಕಸಭೆಗೆ ಸ್ಫರ್ಧಿಸುವ ಬಾಲಿವುಡ್ ತಾರೆ ಸಂಜಯ್ ದತ್ ಆಸೆ ಹೆಚ್ಚುಕಾಲ ಬಾಳದು. ಪ್ರಸಕ್ತ ಪರಿಸ್ಥಿತಿಯಲ್ಲಿ ಅವರು ಲೋಕಸಭಾ ಚುನಾವಣೆಗೆ ಸ್ಫರ್ಧಿಸುವಂತಿಲ್ಲ ಎಂದು ಅವರ ವಕೀಲರು ಹೇಳುತ್ತಾರೆ.
1993ರ ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ದೋಷಿ ಎಂದು ತೀರ್ಮಾನಿಸಲ್ಪಟ್ಟಿರುವ ಕಾರಣ ಆತನ ದೋಷನಿರ್ಣಯದ ಮೇಲೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ಶಿಕ್ಷೆಯನ್ನು ಅಮಾನತ್ತುಗೊಳಿಸದೇ ಇದ್ದರೆ ದತ್ ನಾಮಪತ್ರ ತಿರಸ್ಕೃತವಾಗಲಿದೆ ಎಂದು ವಕೀಲ ವಿ.ಆರ್.ಮನೋಹರ್ ಹೇಳಿದ್ದಾರೆ.
ಇದೀಗ ಜಾಮೀನಿನ ಮೇಲೆ ಇರುವ ಸಂಜು, ತನ್ನ ಮೇಲಿನ ದೋಷನಿರ್ಣದ ವಿರುದ್ಧ ತಡೆಯಾಜ್ಞೆಗಾಗಿ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಹಾಗಾಗಿ ಮೂರು ವರ್ಷಗಳ ಕಠಿಣ ಶಿಕ್ಷೆಗೊಳಗಾಗಿರುವ ದತ್ ಅವರ ದೋಷನಿರ್ಣಯ ಜಾರಿಯಲ್ಲಿದೆ.
ಆತನ ವಿರುದ್ಧ ಭಯೋತ್ಪಾದನಾ ಆರೋಪ ತೆರವುಗೊಂಡಿದ್ದರೂ, ಸ್ಫೋಟಪ್ರಕರಣಕ್ಕೆ ಸಂಬಂಧಿಸಿದಂತೆ ಆತ ಶಿಕ್ಷೆಗೀಡಾಗಿರುವ ಕಾರಣ ಸುಪ್ರೀಂ ಕೋರ್ಟ್ ದೋಷನಿರ್ಣಯದ ಮೇಲೆ ತಡೆ ನೀಡುವುದು ಸಂಶಯ ಎಂದು ತಜ್ಞರು ಹೇಳುತ್ತಾರೆ. |