ಬಾಲಿವುಡ್ ತಾರೆ ಅಮೀರ್ ಖಾನ್ ಏನೇ ಮಾಡಿದರೂ ಅಲ್ಲಿ ಹೊಸದು, ವಿಶಿಷ್ಟತೆ ಇರುತ್ತದೆ. ಇದೀಗ ಬಿಡುಗಡೆಗೊಂಡು ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆಯುತ್ತಿರುವ ಗಜನಿಯ ಸ್ಟೈಲ್ ಯುವಕರ ತಲೆ ಹಾಗೂ ದೇಹದ ಮೇಲೆ ಪರಿಣಾಮ ಬೀರಿರುವ ವಿಚಾರ ಎಲ್ಲರಿಗೆ ಗೊತ್ತು. ಆದರೆ ಗಜನಿ ಕೇಶವಿನ್ಯಾಸವು ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ಅರ್ಚಕರನ್ನೂ ಸೆಳೆದಿದೆಯಂತೆ!ಹನ್ನೆರಡನೆ ಶತಮಾನದ ಈ ಮಂದಿರದ ಸುಮಾರು 30ರಷ್ಟು ಯುವ ಅರ್ಚಕರು ತಮ್ಮ ತಲೆಯನ್ನು ಗಜನಿ ಮಾದರಿಗೆ ಬದಲಿಸಿಕೊಂಡಿದ್ದಾರೆ. ಸಾಂಪ್ರಾದಾಯಿಕ ಉಡುಗೆ ತೊಡುಗೆಗೆ ಸೀಮಿತವಾಗಿರುವ ಅರ್ಚಕರಿಗೆ ಗ್ಲಾಮರ್ ಅವಕಾಶ ಕಡಿಮೆ. ಆದರೆ ಇದೀಗ ತಮ್ಮ ಗಜನಿ ಕೇಶವಿನ್ಯಾಸದಿಂದಾಗಿ ಅವರು ವಿಭಿನ್ನವಾಗಿ ಕಂಡು ಬರುತ್ತಿದ್ದಾರೆ." ಎರಡು ದಿನಗಳ ಹಿಂದೆ ನಾನು ಕೂದಲು ಕತ್ತರಿಸಿದಾಗ ಎಲ್ಲರೂ ನನ್ನನ್ನು ವಿಚಿತ್ರ ಎಂಬಂತೆ ದಿಟ್ಟಿಸಿದರು. ಹಾಗಾಗಿ ಮೊದಲಿಗೆ ಒಂಥರಾ ಅನಿಸಿತ್ತು. ಆದರೀಗ ಅಂತಹ ಹಲವಾರು ಕೇಶವಿನ್ಯಾಸಿಗರ ಸುತ್ತಮುತ್ತ ಇರುವುದರಿಂದ ಏನೂ ಅನಿಸುವುದಿಲ್ಲ" ಎಂದು ಸಂತೋಷ್ ಕುಮಾರ್ ಎಂಬ ಯುವ ಅರ್ಚಕರು ಹೇಳಿದ್ದಾರೆ. ನಾನೇನು ಅಮೀರ್ ಖಾನ್ ಅಭಿಮಾನಿಯಲ್ಲ. ಆದೆ ಗಜನಿಯಲ್ಲಿ ಅವರ ಕೇಶವಿನ್ಯಾಸ ಇಷ್ಟವಾಯಿತು. ಹಾಗಾಗಿ ನಾನೂ ಆ ವಿನ್ಯಾಸ ಮಾಡ್ಕೊಂಡೆ ಎಂಬುದು ಅವರ ಹೇಳಿಕೆ.ಮೊದಲಿಗೆ ದೇವಾಲಯದ ಭಕ್ತಾದಿಗಳು ನಮ್ಮನ್ನು ನೋಡಿ ಬೆರಗಾದರು. ಅರ್ಚಕರೂ ಬಾಲಿವುಡ್ ಶೈಲಿ ಅಳವಡಿಸಿಕೊಂಡಿರುವುದನ್ನು ಅವರಿಗೆ ಅರಗಿಸಿಕೊಳ್ಳಲಾಗಲಿಲ್ಲ ಎಂದು ಶಿವ ಶಂಕರ್ ಪಾಂಡಾ ಎಂಬ ಇನ್ನೋರ್ವ ಅರ್ಚಕರು ಹೇಳುತ್ತಾರೆ.ಇದು ಭಕ್ತರ ಮೇಲೆ ನಕಾರಾತ್ಮಕ ಪರಿಣಾಮ ಪರಿಣಾಮ ಬೀರುವುದಿಲ್ಲವೇ ಎಂದರೆ, ಇಲ್ಲಪ್ಪ, ಇದು ಹೆಚ್ಚು ಯಾತ್ರಿಕರನ್ನು ಪ್ರತಿದಿನ ಆಕರ್ಷಿಸುತ್ತದೆ ಎಂಬುದು ಪಾಂಡಾ ಉತ್ತರ.ಒಂದು ಹೆಜ್ಜೆ ಮುಂದೆ ಹೋಗಿರುವ ಇನ್ನೋರ್ವ ಅರ್ಚಕ ಹನಿಗುರು ಇದೀಗ ಜಿಮ್‌ಗೆ ಹೋಗಲು ಆರಂಭಿಸಿದ್ದಾರಂತೆ. ಅಮೀರ್‌ನ ಯೆಯ್ಟ್ ಪ್ಯಾಕ್‌ನಿಂದ ಆಕರ್ಷಿತರಾಗಿರುವ ಅವರೀಗ ತನ್ನ ಮೈಯಲ್ಲೂ ಪ್ಯಾಕ್ ಮೂಡಿಸಲು ದೇಹ ದಂಡನೆಗಿಳಿದಿದ್ದಾರೆ. ಇತರರಂತೆ ಅರ್ಚಕರು ಯಾಕೆ ಪ್ಯಾಶನ್ ಅಳವಡಿಸಿಕೊಳ್ಳಬಾರದು ಎಂಬುದು ಅವರ ಪ್ರಶ್ನೆ. ಯೆಯ್ಟ್ ಪ್ಯಾಕ್‌ಗಾಗಿ ಜಿಮ್‌ನಲ್ಲಿ ದಿನದ ಹೆಚ್ಚಿನ ಅವಧಿ ಕಳೆದು ದೇಹ ದಂಡಿಸಿದ್ದ ಅಮೀರ್, ತನ್ನ ಮಾಸ್ಟರ್ ಹೇಳಿದ್ದ ವಿಭಿನ್ನ ಆಹಾರ ಪದ್ಧತಿಯನ್ನೂ ಅಳವಡಿಸಿಕೊಂಡಿದ್ದರು. ಇದೀದ ಅಮೀರ್ ಆಕರ್ಷಿತ ಈ ಅರ್ಚಕರೂ ಸಹ ಇದೇ ಆಹಾರ ಪದ್ಧತಿಯನ್ನು ಅನುಸರಿಸುತ್ತಾರಾ ಎಂಬುದು ಗೊತ್ತಾಗಿಲ್ಲ. |