ಶೇರು ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಮಾಡಿರುವ ಸತ್ಯಂ ಕಂಪ್ಯೂಟರ್ಸ್‌ನ ಮಾಜಿ ಅಧ್ಯಕ್ಷ ರಾಮಲಿಂಗರಾಜುವನ್ನು ಬಂಧಿಸುವಂತೆ ಆಂಧ್ರಪ್ರದೇಶ ಸರ್ಕಾರದ ಮೇಲೆ ಭಾರಿ ಒತ್ತಡ ಹೇರಲಾಗುತ್ತಿದೆ. ತಪ್ಪು ಲೆಕ್ಕ ನೀಡಿ ಏಳು ಸಾವಿರ ಕೋಟಿ ರೂಪಾಯಿ ಸುಳ್ಳುಲಾಭ ತೋರಿಸಿ ವಂಚಿಸಿದ ರಾಜುವನ್ನು ಕೂಡಲೇ ಬಂಧಿಸಬೇಕು ಎಂಬುದಾಗಿ ಶೇರುದಾರರು ಸೇರಿದಂತೆ ಸಾರ್ವಜನಿಕರು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ರಾಜಶೇಖರರೆಡ್ಡಿ ಅವರನ್ನು ಒತ್ತಾಯಿಸಿದ್ದಾರೆ. ಜನವರಿ 7 ರಂದು ರಾಮಲಿಂಗರಾಜು ಏಳು ಸಾವಿರ ಕೋಟಿ ರುಪಾಯಿಗಳ ಅವ್ಯವಹಾರದ ತಪ್ಪೊಪ್ಪಿಗೆ ಹಾಗೂ ರಾಜೀನಾಮೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮುಂಬೈ ಹಾಗೂ ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಸತ್ಯಂ ಷೇರುಗಳು ತೀವ್ರ ಇಳಿಮುಖ ಕಂಡು ಪಾತಾಳ ಸೇರಿತ್ತು. ಶುಕ್ರವಾರದಂದು ಸತ್ಯಂ ಶೇರು ಬೆಲೆ ಆರು ರೂಪಾಯಿಗೆ ಇಳಿದಿದೆ. ಸಾವಿರಾರು ಸಂಖ್ಯೆಯ ಸತ್ಯಂ ಷೇರುದಾರರು ಅಪಾರ ಪ್ರಮಾಣದ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಕಂಪನಿಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮಲಿಂಗರಾಜು ವಿರುದ್ಧ ವ್ಯಾಪಕ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಜನಸಾಮಾನ್ಯರ ಹಣವನ್ನು ನುಂಗಿ ನೀರುಕುಡಿದಿರುವ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆಂಧ್ರಪ್ರದೇಶ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ. |