ಸತ್ಯಂ ಕಂಪ್ಯೂಟರ್ಸ್ ಹಣಕಾಸು ಹಗರಣದ ತನಿಖೆಯನ್ನು ಐಬಿ-ಸಿಐಡಿ ಸ್ವತಂತ್ರವಾಗಿ ತನಿಖೆ ನಡೆಸುತ್ತಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ವಿ.ರಾಜಶೇಖರ ರೆಡ್ಡಿ ಹೇಳಿದ್ದಾರೆ.
ಸಿಬಿ-ಸಿಐಡಿಗೆ ಸತ್ಯಂ ಅವ್ಯವಹಾರದ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ರೆಡ್ಡಿ ವರದಿಗಾರರಿಗೆ ತಿಳಿಸಿದ್ದಾರೆ. ಅವರು ಚೆನ್ನೈನಲ್ಲಿ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಅಚ್ಚರಿ ಎಂದರೆ ಇದುವರೆಗೆ ರಾಮಲಿಂಗಾ ರಾಜು ವಿರುದ್ಧ ಯಾರೂ ಹೈದರಬಾದಿನಲ್ಲಿ ಇದುವರೆಗೆ ಔಪಚಾರಿಕ ದೂರು ದಾಖಲಿಸಲಿಲ್ಲ. ಆದರೆ ಸು-ಮೋಟೋ ಕ್ರಮ ಕೈಗೊಳ್ಳುವಂತೆ ಒತ್ತಡ ಹೆಚ್ಚುತ್ತಿದೆ ಎಂದು ಹೈದರಾಬಾದ್ ಪೊಲೀಸ್ ಮೂಲಗಳು ಹೇಳಿವೆ.
ರಾಜು ಕುಟಂಬ ಪ್ರೇಷಿತ ಮೇತಾಸ್ ಇನ್ಫ್ರಾ ಕಂಪೆನಿಗೆ ನೀಡಲಾಗಿರುವ ಯೋಜನೆಯನ್ನು ಸರ್ಕಾರವು ಹಿಂದಕ್ಕೆ ಪಡೆದುಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ, ಹಗರಣವು ಎರಡು ದಿನಗಳ ಹಿಂದಷ್ಟೆ ಬೆಳಕಿಗೆ ಬಂದಿದ್ದು, ನಾವು ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ ಎಂದರು.
ಈ ಮಧ್ಯೆ, ಸತ್ಯಂ ಸಂಸ್ಥಾಪಕ ರಾಮಲಿಂಗಾ ರಾಜು ಅವರು ಹೈದರಾಬಾದಿನಲ್ಲೇ ಇದ್ದಾರೆ ಎಂದು ಹೇಳಿರುವ ಅವರ ವಕೀಲ ಭರತ್ ಕುಮಾರ್, ರಾಜ ಕಾನೂನು ಪ್ರಕ್ರಿಯೆಗೆ ಲಭ್ಯವಿದ್ದಾರೆ ಎಂದು ಹೇಳಿದ್ದಾರೆ.
ಬುಧವಾರದಂದು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾ ರಾಜ, 7,800 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಹೇಳಿದ್ದರು. ಅವರ ಸಹೋದರ ಹಾಗೂ ಆಡಳಿತ ನಿರ್ದೇಶಕ ಬಿ. ರಾಮ ರಾಜು ಅವರೂ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಏನು ನಡೆದಿದೆಯೋ ಅದು ದುರದೃಷ್ಟಕರ. ಇಂತಹ ಹಗರಣ ನಡೆಯಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ರೆಡ್ಡಿ ಹೇಳಿದ್ದಾರೆ. |