ರಾಮಲಿಂಗಾರಾಜು ಕರ್ಮಕಾಂಡದ ಹಿನ್ನೆಲೆಯಲ್ಲಿ ಆರ್ಥಿಕ ಅಧಪತನಕ್ಕೀಡಾಗಿರುವ ಸತ್ಯಂ ಕಂಪ್ಯೂಟರ್ಸ್ ಸಿಬ್ಬಂದಿಗಳ ಎರಡು ತಿಂಗಳ ಸಂಬಳ ಹಿಡಿದುಕೊಳ್ಳುವುದಾಗಿ ಶುಕ್ರವಾರ ಘೋಷಿಸಿದೆ. ಇದಲ್ಲದೆ, ಸುಮಾರು 15 ಸಾವಿರ ಸಿಬ್ಬಂದಿಗಳನ್ನು ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳುಹಿಸಲಿದೆ ಎಂಬ ವದಂತಿಗಳು ಹಬ್ಬಿವೆ. ಸಂಸ್ಥೆಯಲ್ಲಿ ಸುಮಾರು 53 ಸಾವಿರ ಉದ್ಯೋಗಿಗಳಿದ್ದಾರೆ.
ಸತ್ಯಂ ಸಂಸ್ಥೆಗೆ ಸಿಬ್ಬಂದಿಗಳ ವೆಚ್ಚವನ್ನು ಭರಿಸಲು ತಿಂಗಳೊಂದರ 500 ಕೋಟಿ ರೂಪಾಯಿ ಅವಶ್ಯಕತೆ ಇದೆ. ಆದರೆ ಸಂಸ್ಥೆಯ ಹಣಕಾಸು ಸ್ಥಿತಿ ಏನೇನೂ ಚೆನ್ನಾಗಿಲ್ಲ. ಹಾಗಾಗಿ ಸತ್ಯಂ ಕಚೇರಿಯ ಸಿಬ್ಬಂದಿಗಳು ಆತಂಕಕ್ಕೆ ಬಿದ್ದಿದ್ದು, ಕಚೇರಿಯಲ್ಲೆಲ್ಲ ಶುಕ್ರವಾರ ಅದೇ ಮಾತು.
ಅದೇನೆ ಇದ್ದರೂ, ಕಂಪೆನಿಯ ವಕ್ತಾರರು ಇಂತಹ ಇಮೇಲ್ ಸಂದೇಶವನ್ನು ಅಲ್ಲಗಳೆದಿದ್ದಾರೆ. ಅಲ್ಲದೆ ಪರಿಸ್ಥಿತಿಯ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದಲ್ಲದೆ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ವದಂತಿಗಳನ್ನೂ ಅವರು ತಿರಸ್ಕರಿಸಿದ್ದಾರೆ.
ಸತ್ಯಂ ಅವ್ಯವಹಾರ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಸತ್ಯಂ ಶೇರು ಬೆಲೆ ಆರು ರೂಪಾಯಿಗಿಳಿದಿದೆ. ಸಂಸ್ಥೆಯ ಶೇರುದಾರರು ಮತ್ತು ಸಿಬ್ಬಂದಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. |