ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿ ಬಳಿಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾ ರಾಜು ಅವರನ್ನು ಪೊಲೀಸರು ಬಂಧಿಸಿದ್ದು ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.ರಾಮಲಿಂಗ ರಾಜು ಅವರೊಂದಿಗೆ, ಅವರ ಸಹೋದರ, ಸಂಸ್ಥೆಯ ನಿರ್ದೇಶಕರಾಗಿದ್ದ ರಾಮರಾಜು ಅವರನ್ನೂ ಬಂಧಿಸಲಾಗಿದ್ದು, ಸಿಐಡಿ ಅಧಿಕಾರಿಗಳು ಅವರನ್ನು ರಾತ್ರಿಯಿಡೀ ವಿಚಾರಣೆ ನಡೆಸಿದ್ದಾರೆ. ಈ ವಂಚನೆಯ ಕುರಿತು ನಿರ್ದೇಶಕ ಮಂಡಳಿಯಲ್ಲಿ ಇತರ ಯಾರಿಗಾದರೂ ತಿಳಿದಿತ್ತೇ ಮತ್ತು ಕಂಪೆನಿಯು ಎಂದಿನಿಂದ ಈ ಹಣಕಾಸು ಅವ್ಯವಹಾರ ನಡೆಸುತ್ತಿದೆ ಎಂಬ ವಿಚಾರಗಳ ಸುತ್ತ ತನಿಖೆ ಕೇಂದ್ರೀಕೃತವಾಗಿತ್ತು ಎನ್ನಲಾಗಿದೆ." ನಾವು ತನಿಖೆ ನಡೆಸುತ್ತಿದ್ದು, ಸತ್ಯಂ ಕಚೇರಿಗೂ ಭೇಟಿ ನೀಡಲಿದ್ದೇವೆ. ರಾಮಲಿಂಗ ಹಾಗೂ ಅವರ ಸಹೋದರನನ್ನು ವಶಕ್ಕೆ ತೆಗೆದುಕೊಂಡಿದ್ದು ತನಿಖೆ ನಡೆಯುತ್ತಿದೆ" ಎಂದು ಆಂಧ್ರ ಸಿಐಡಿ ಐಜಿ ವಿ.ಎಸ್.ಕೆ.ಕೌಮುದಿ ತಿಳಿಸಿದ್ದಾರೆ.ತನಿಖೆಯುದ್ದಕ್ಕೂ ಸತ್ಯಂನ ಮಾಜಿ ಅಧ್ಯಕ್ಷ ಶಾಂತವಾಗಿದ್ದರು ಎಂದು ಹೇಳಲಾಗಿದೆ. ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ರಾಜು ಸಹೋದರರನ್ನು ಶುಕ್ರವಾರ ತಡರಾತ್ರಿ ಬಂಧಿಸಲಾಗಿದೆ." ರಾಮಲಿಂಗ ರಾಜು ಹಾಗೂ ರಾಮ ರಾಜು ವಿರುದ್ಧ ಆಂಧ್ರ ಸಿಐಡಿ ಸಮನ್ಸ್ ಹೊರಡಿಸಿತ್ತು. ಇದರನ್ವಯ ರಾಜು ಪೊಲೀಸರ ಮುಂದೆ ಹಾಜರಾಗಿದ್ದು, ಬಳಿಕ ಇವರನ್ನು ಬಂಧಿಸಲಾಗಿದೆ. ಪೊಲೀಸರು ಮೂರು ಗಂಟೆಗಳ ಕಾಲ ಇವರ ತನಿಖೆ ನಡೆಸಿದ್ದಾರೆ. ರಾಜು ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಾರಣ ವೈದ್ಯರನ್ನು ಕರೆಸಲಾಯಿತು. ಅವರಿಗೆ ಚಿಕಿತ್ಸೆ ನೀಡಲಾಗಿದ್ದು ಈಗ ಅವರ ಆರೋಗ್ಯ ಸುಧಾರಿಸಿದೆ" ಎಂದು ಹೇಳಿರುವ ರಾಜು ವಕೀಲ ಭರತ್ ಕುಮಾರ್ ರಾಜು ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. |