ಮುಂಬೈ ದಾಳಿಯ ಹಿಂದೆ ಪಾಕಿಸ್ತಾನದ ಶಕ್ತಿಗಳ ಕೈವಾಡವಿದೆ ಎಂಬುದಾಗಿ ನೀಡಿರುವ ಪುರಾವೆಗೆ ಪಾಕಿಸ್ತಾನದಿಂದ ಯಾವುದೇ ಅಧಿಕೃತ ಉತ್ತರ ಪಡೆದಿಲ್ಲ ಎಂದು ಭಾರತ ಶನಿವಾರ ಹೇಳಿದೆ.
"ನಾವು ಯಾವಾಗ ಉತ್ತರ ಪಡೆಯುತ್ತೇವೆಯೋ ಆವಾಗ ಅದಕ್ಕೆ ಪ್ರತಿಕ್ರಿಯಿಸುತ್ತೇವೆ. ನಾವಿನ್ನೂ ಉತ್ತರ ಪಡೆದಿಲ್ಲ" ಎಂದು ವಿದೇಶಾಂಗ ಇಲಾಖಾ ರಾಜ್ಯ ಸಚಿವ ಆನಂದ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತ ನೀಡಿದ 'ಕೆಲವು ಮಾಹಿತಿ'ಗಳಿಗೆ ಐಎಸ್ಐ ತನ್ನ 'ಪ್ರತಿಕ್ರಿಯೆ' ನೀಡಿದೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಶುಕ್ರವಾರ ಹೇಳಿದ್ದರು.
"ಭಾರತ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳಿಗೆ ನೀಡಿರುವ ಭರವಸೆಯನ್ನು ಪಾಕಿಸ್ತಾನ ಉಳಿಸಿಕೊಳ್ಳಬೇಕು. ಅದು ತನ್ನ ಮಾತಿನಂತೆ ನಡೆದುಕೊಳ್ಳಬೇಕು. ಅದು ತನ್ನ ನೆಲದಲ್ಲಿರುವ ಉಗ್ರರ ನೆಲೆಗಳನ್ನು ಮತ್ತು ಮೂಲ ಸೌಕರ್ಯಗಳನ್ನು ಧ್ವಂಸಗೊಳಿಸಬೇಕು ಎಂಬ ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ದಾಳಿಯಲ್ಲಿ ಒಳಗೊಂಡಿರುವ ಸಂಘಟನೆಗಳು ಮತ್ತು ವ್ಯಕ್ತಿಗಳ ಹೆಸರನ್ನು ಗುರುತಿಸಲಾಗಿದೆ. ಅವರು ಭಾರತದ ಮೇಲೆ ದಾಳಿ ನಡೆಸಿರುವ ಕಾರಣ ಅವರನ್ನು ಭಾರತೀಯ ಕಾನೂನಿನಡಿಯಲ್ಲಿ ಶಿಕ್ಷಿಸಬೇಕಾಗಿದೆ ಎಂದು ಅವರು ನುಡಿದರು.
ಮುಂಬೈ ದಾಳಿಯ ರೂವಾರಿಗಳನ್ನು ಕಾನೂನಿನ ಕಟಕಟೆಗೆ ತರುವುದು ಮತ್ತು ಉಗ್ರರಿಗೆ ನೀಡಲಾಗಿರುವ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿ ತಟಸ್ಥವಾಗಿಸುವುದು ಒಂದು ರಾಷ್ಟ್ರವಾಗಿರುವ ಪಾಕಿಸ್ತಾನದ ಭದ್ಧತೆಯಾಗಿದೆ ಎಂದು ಶರ್ಮಾ ಹೇಳಿದ್ದಾರೆ. |