ಉಗ್ರರಿಗೆ ಆಶ್ರಯ ನೀಡಿರುವ ಕಾರಣಕ್ಕಾಗಿ ಮಹಿಳೆಯೊಬ್ಬಾಕೆಯನ್ನು ಬಂಧಿಸಿರುವ ಕೆಲವೇ ದಿನಗಳ ಬಳಿಕ, ಅವಿತು ಕುಳಿತಿರುವ ಉಗ್ರರಿಗೆ ಸಹಾಯ ಹಸ್ತ ನೀಡಿರುವುದಕ್ಕಾಗಿ ಇನ್ನೋರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೂಂಛ್‌ನ ಮೆಂದಾರ್ ವ್ಯಾಪ್ತಿಯ ಭಾಟಿ ಧಾರ್ ಅರಣ್ಯಪ್ರದೇಶದಲ್ಲಿ ಸತತ ಒಂಭತ್ತು ದಿನಗಳ ಕಾಲ ನಡೆಸಿದ ಸೇನೆಯ ಕಾರ್ಯಾಚರಣೆಯಲ್ಲಿ ತಪ್ಪಿಸಿಕೊಂಡಿರರುವ ಉಗ್ರರಿಗೆ ಈ ಮಹಿಳೆ ಸಹಾಯ ಹಸ್ತ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ.
ಮೊಹಮ್ಮದ್ ಫರೀದ್ ಎಂಬಾತನ ಪತ್ನಿ ಕುರೇಶಾ ಬಿ ಎಂಬುದಾಗಿ ಬಂಧಿತ ಮಹಿಳೆಯನ್ನು ಗುರುತಿಸಲಾಗಿದೆ. ಈಕೆಯನ್ನು ಹೆಚ್ಚಿನ ತನಿಖೆಗಾಗಿ ಜಮ್ಮುವಿನ ಜಂಟಿ ತನಿಖಾ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರರಿಗೆ ಆಶ್ರಯ ನೀಡಿರುವ ಕಾರಣಕ್ಕಾಗಿ ಇದೀಗಾಗಲೇ ಬಂಧನಕ್ಕೀಡಾಗಿರುವ ಮುನೀಜಾ ಬಿ ಎಂಬಾಕೆ ನೀಡಿರುವ ಮಹಿತಿಯಾಧಾರದಲ್ಲಿ ಕುರೇಶಾಳನ್ನು ಬಂಧಿಸಲಾಗಿದೆ. ಈಕೆಯನ್ನು ಇದೀಗಾಗಲೇ ತನಿಖೆಗೆ ಒಳಪಡಿಸಲಾಗಿದೆ.
ಸತತ ಎಂಟು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಮತ್ತು ಮೂವರು ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಜನವರಿ 8ರಂದು ಹಿಂತೆಗೆದು ಕೊಳ್ಳಲಾಗಿತ್ತು. |