ಹಣಕಾಸು ಅವ್ಯವಹಾರದ ಹಿನ್ನೆಲೆಯಲ್ಲಿ ಪದತ್ಯಾಗಮಾಡಿರುವ ಸತ್ಯ ಕಂಪ್ಯೂಟರ್ಸ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದ ರಾಮಲಿಂಗಾ ರಾಜು ಹಾಗೂ ಅವರ ಸಹೋದರನನ್ನು ಶುಕ್ರವಾರ ಸಿಕಂದರಾಬಾದಿನಲ್ಲಿ ಮ್ಯಾಜೆಸ್ಟ್ರೀಟ್ ಎದುರುಗಡೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಸಿಕ್ಸ್ತ್ ಅಡಿಷನಲ್ ಚೀಫ್ ಜುಡಿಶಿಯಲ್ ಮ್ಯಾಜೆಸ್ಟ್ರೀಟ್ ರಾಮಕೃಷ್ಣ ಅವರ ನಿವಾಸದಲ್ಲಿ ಸಿಐಡಿ ಬಂಧನದಲ್ಲಿದ್ದ ರಾಜು ಸಹೋದರರನ್ನು ಹಾಜರು ಪಡಿಸಲಾಗಿದೆ.
ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದ ರಾಮಲಿಂಗಾ ರಾಜು ಅವರನ್ನು ಬಂಧಿಸಿರಾಜ್ಯ ಪೊಲೀಸ್ ಮುಖ್ಯಕಚೇರಿಯಲ್ಲಿ ಇರಿಸಲಾಗಿತ್ತು. ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವ ಅವರ ತಪಾಸಣೆಗಾಗಿ ವೈದ್ಯರ ತಂಡವೂ ಅಲ್ಲಿ ನೆರೆದಿತ್ತು.
ರಾಜು ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕು ಎಂದು ಸೆಬಿ ಮನವಿ ಸಲ್ಲಿಸಿತ್ತು. ಹೆಚ್ಚಿನ ವಿಚಾರಣೆಗಾಗಿ ಸಹೋದರರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಸಿಬಿ-ಸಿಐಡಿ ನ್ಯಾಯಾಲಯವನ್ನು ವಿನಂತಿಸಿತ್ತು. |