ಬ್ಲಾಗಿನಂಗಳದಲ್ಲಿ ಮತ್ತೊಂದು ರಾಜಕೀಯ ತಾರೆ ಮಿನುಗುತ್ತಿದೆ. ಇದ್ಯಾರೆಂದರೆ, ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ 81ರ ಹರೆಯದ ಎಲ್.ಕೆ.ಆಡ್ವಾಣಿ. ಸೈಬರ್ ಟೂಲ್ ಬಳಕೆಗೆ ಇಳಿದಿರುವ ಆಡ್ವಾಣಿ ಬ್ಲಾಗಿನ ತನ್ನ ಬರಹದಲ್ಲಿ ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಕುರಿತ ವಿವಾದಾಸ್ಪದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರಾಮಕೃಷ್ಣ ಮಿಶನ್ ಮುಖ್ಯಸ್ಥ ಸ್ವಾಮಿ ರಂಗನಾಥಾನಂದ ಅವರೊಂದಿಗಿನ ಭೇಟಿಯ ವೇಳೆಗೆ ಮೂರು ವರ್ಷದ ಹಿಂದೆ ಜಿನ್ನಾ ಕುರಿತು ಆ ಹೇಳಿಕೆ ಯಾಕೆ ನೀಡಬೇಕಾಯಿತು ಎಂದು ಅವರು ತನ್ನ ಶುಕ್ರವಾರದ ಬರಹದಲ್ಲಿ ಹೇಳಿದ್ದಾರೆ.
"ಜಿನ್ನಾ ಅವರು 1947ರ ಆಗಸ್ಟ್ 11ರಂದು ಜಿನ್ನಾ ಅವರು ಪಾಕಿಸ್ತಾನದ ಸಾಂವಿಧಾನಿಕ ಅಧಿವೇಶನದಲ್ಲಿ ಮಾಡಿದ ಐತಿಹಾಸಿಕ ಭಾಷಣವನ್ನು ಸ್ವಾಮೀಜಿ ಶ್ಲಾಘಿಸಿದರು. ಅವರ ಭಾಷಣದಲ್ಲಿ ಜಾತ್ಯತೀತತೆಯ ಅರ್ಥದ ನೈಜ ವ್ಯಾಖ್ಯಾನ ಮಾಡಲಾಗಿತ್ತು ಎಂದು ಸ್ವಾಮೀಜಿ ಹೇಳಿದ್ದರು. ಸ್ವಾಮೀಜಿಯೊಂದಿಗಿನ ಈ ಸಂಭಾಷಣೆಯು ಅಂತಃಪ್ರಜ್ಞೆಯಲ್ಲಿ ತಾನು 2005ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ನೀಡಿರುವ ಹೇಳಿಕೆಯಲ್ಲಿ ನಿರ್ಣಾಯಕ ಪಾತ್ರವಹಿಸಿದೆ" ಎಂದು ಅವರು ತನ್ನ ಬರಹದಲ್ಲಿ ಹೇಳಿದ್ದಾರೆ. ಪಾಕ್ ಭೇಟಿಯ ವೇಳೆಗೆ ಜಿನ್ನಾ ಕುರಿತು ನೀಡಿರುವ ಹೇಳಿಕೆಯಿಂದ ಉದ್ಭವಿಸಿರುವ ವಿವಾದದಿಂದಾಗಿ ಆಡ್ವಾಣಿ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಈ ಹೇಳಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಭಾರತ ಮತ್ತು ಪಾಕಿಸ್ತಾನ ವಿಭಜನೆಗಿಂತ ಮುಂಚಿನ ದಿನಗಳಲ್ಲಿ ತನ್ನ ಮತ್ತು ಸ್ವಾಮೀಜಿಯ ಒಡನಾಟವನ್ನೂ ಆಡ್ವಾಣಿ ತನ್ನ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ. |