ಏಳು ಮಂದಿ ಭಾರತೀಯರೂ ಸೇರಿದಂತೆ ಹಾಂಕಾಂಗ್‌ನ ಹಡಗನ್ನು ಸೊಮಾಲಿಯಾ ಕಡಲ್ಗಳ್ಳರು ಬಿಡುಗಡೆ ಮಾಡಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಡಗಿನಲ್ಲಿ ಒಟ್ಟು 25 ಮಂದಿಯನ್ನು ಒತ್ತೆಯಾಳುಗಳನ್ನಾಗಿಟ್ಟುಕೊಳ್ಳಲಾಗಿತ್ತು.
ಎಂ.ವಿ. ಡಿಲೈಟ್ ಎಂಬ ಹಾಂಕಾಂಗ್ ನಮೂದಿತ ಹಡಗನ್ನು ಕಳೆದ ವರ್ಷದ ನವೆಂಬರ್ 18ರಂದು ಗಲ್ಫ್ ಆಫ್ ಆಡೆನ್‌ನಿಂದ ಅಪಹರಿಸಲಾಗಿತ್ತು. ಈ ಹಡಗಿನಲ್ಲಿ ಏಳು ಮಂದಿ ಭಾರತೀಯರು, ಇಬ್ಬರು ಪಾಕಿಸ್ತಾನಿಗಳು, ಏಳು ಫಿಲಿಫೈನ್ಸ್, ಏಳು ಮಂದಿ ಇರಾನ್ ಹಾಗೂ ಇಬ್ಬರು ಘಾನಿಯಾ ಪ್ರಜೆಗಳು ಇದುವರೆಗೆ ಒತ್ತೆಯಾಳುಗಳಾಗಿದ್ದರು. ಇದೀಗ ಅವರೆಲ್ಲ ಬಿಡುಗಡೆಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್‌ನ ಬಂದರ್ ಅಬ್ಬಾಸ್ ಬಂದರಿಗೆ ಸಾಗುತ್ತಿದ್ದ ಈ ಹಡಗು 38 ಸಾವಿರ ಟನ್ ಗೋಧಿ ಸಾಗಾಟ ಮಾಡುತ್ತಿತ್ತು. ಹಡಗನ್ನು ಅಪಹರಿಸಿದವರು ಸೊಮಾಲಿಯಾ ಉಗ್ರರಿರಬಹುದು ಎಂದು ಶಂಕಿಸಲಾಗಿದೆ.
ಕಳೆದ ವರ್ಷ ಗಲ್ಫ್ ಆಫ್ ಆಡೆನ್ ಮತ್ತು ಭಾರತೀಯ ಸಮುದ್ರ ಪ್ರದೇಶದಲ್ಲಿ ಸುಮಾರು 130ಕ್ಕೂ ಹೆಚ್ಚು ಅಪಹರಣ ಪ್ರಕರಣಗಳು ನಡೆದಿದ್ದು, ವಿಶ್ವದ ಬಹುದೊಡ್ಡ ಅಪಾಯಕಾರಿ ಜಲಮಾರ್ಗವಾಗಿ ಇದು ಪರಿವರ್ತನೆಯಾಗಿದೆ.
|