ಸಮಾಜವಾದಿ ಪಕ್ಷ ಸೂಚಿಸಿರುವ ಲಕ್ನೋ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಾಲಿವುಡ್ ನಟ ಸಂಜಯ್ ದತ್ ಪತ್ನಿಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವಮಾನಿಸಿದ್ದಾರೆ ಎಂದು ಅಮರ್ ಸಿಂಗ್ ಭಾನುವಾರ ಆರೋಪಿಸಿದ್ದಾರೆ.
"ಮಾನ್ಯತಾರನ್ನು ಗುರುತಿಸಲು ದಿಗ್ವಿಜಯ್ ಸಿಂಗ್ ನಿರಾಕರಿಸಿದ್ದು ಆಕೆಯನ್ನು ಅವಮಾನಿಸಿದ್ದಾರೆ" ಎಂದು ಅಮರ್ ಸಿಂಗ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.
ಸಂಜಯ್ ದತ್ ಮೇಲೆ ಕ್ರಿಮಿನಲ್ ಪ್ರಕರಣಗಳಿರುವುದರಿಂದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದಿದ್ದರೆ ಅವರ ಪತ್ನಿ ಮಾನ್ಯತಾರಿಗೆ ಟಿಕೆಟ್ ಕೊಡಲು ಸಿದ್ಧ ಎಂದು ಸಮಾಜವಾದಿ ಪಕ್ಷ ಹೇಳಿಕೊಂಡಿತ್ತು. ಇದಕ್ಕೆ ಶನಿವಾರ ಪ್ರತಿಕ್ರಿಯೆ ನೀಡಿದ್ದ ದಿಗ್ವಿಜಯ್, "ಅವರು ಯಾರೆಂದು ನನಗೆ ತಿಳಿದಿಲ್ಲ" ಎಂದಿದ್ದದ್ದರು.
"ಒಂದು ವೇಳೆ ನಾನು ಲಕ್ಷ್ಮಣ್ ಸಿಂಗ್ ಯಾರು ಎಂದು ಕೇಳಿದರೆ... ಆ ವ್ಯಕ್ತಿ ದಿಗ್ವಿಜಯ್ ಸಿಂಗ್ ಸಹೋದರನಾಗಿದ್ದು ಬಿಜೆಪಿಯಲ್ಲಿದ್ದಾರೆ" ಎಂದು ಅಮರ್ ಸಿಂಗ್ ಆಕ್ರೋಶಭರಿತರಾಗಿ ಪ್ರಶ್ನಿಸಿದರು.
ಲಕ್ನೋ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪರ ಸ್ಪರ್ಧಿಸಲು ಚಿತ್ರನಟ ಸಂಜಯ್ ದತ್‌ರವರಿಗೆ ಟಿಕೆಟ್ ನೀಡಲು ಜನವರಿ 8ರಂದು ನಿರ್ಧರಿಸಿ ಈ ಸಂಬಂಧ ಅವರಲ್ಲಿ ಪ್ರಸ್ತಾಪಿಸಿತ್ತು. ಅವರ ಮೇಲೆ ಮುಂಬೈ ಸರಣಿ ಸ್ಫೋಟದ ಆಪಾದನೆಯಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದಿರಬಹುದು ಎಂಬ ಭಯ ಇದೀಗ ಪಕ್ಷಕ್ಕೆ ಕಾಡಲಾರಂಭಿಸಿದೆ.
|