ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ಹುಟ್ಟುಹಬ್ಬಕ್ಕಾಗಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ನಾಯಕರು ಕಾರ್ಯಕರ್ತರಿಗೆ ಹಣ ಸಂಗ್ರಹಿಸುವಂತೆ ಹೇಳಿರುವ ದೂರವಾಣಿ ಸಂಭಾಷಣೆಯನ್ನೊಳಗೊಂಡ ಸಿಡಿಯನ್ನು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಭಾನುವಾರ ಬಿಡುಗಡೆಗೊಳಿಸಿದ್ದಾರೆ.
"ಹಿರಿಯ ಬಿಎಸ್‌ಪಿ ನಾಯಕರಾದ ತಿಲಕ್ ಚಂದ್ ಅಹಿರ್ವಾಲ್ ಮತ್ತು ಸಿ.ಪಿ. ಸಿಂಗ್‌ರಿಂದ 20 ಲಕ್ಷ ರೂಪಾಯಿ ಪಡೆದು ಅದನ್ನು ದೆಹಲಿಯ ಬಿಎಸ್‌ಪಿ ಮುಖಂಡ ಸುರೇಶ್ ಚಂದ್‌ರಿಗೆ ಕೊಟ್ಟ ಮಾಹಿತಿಯೂ ಈ ಸಿಡಿಯಲ್ಲಿದೆ" ಎಂದು ಅಮರ್ ಸಿಂಗ್ ಪತ್ರಕರ್ತರಿಗೆ ತಿಳಿಸಿದರು.
ಈ ಹಣವನ್ನು ಪಕ್ಷದ 39 ಕಾರ್ಯಕರ್ತರಿಗೆ, ಸ್ಥಳೀಯ ನಾಯಕರಿಗೆ ಹಾಗೂ ದೆಹಲಿಯ ಕಾರ್ಪೋರೇಟರುಗಳಿಗೆ ಹಂಚಲಾಗಿದೆ. ಅಲ್ಲದೆ ಅದನ್ನು ಮಾಯಾವತಿಯವರ ಹೆಸರಿನ ಬ್ಯಾಂಕ್ ಡ್ರಾಫ್ಟ್ ಮೂಲಕ ಕಳುಹಿಸುವಂತೆ ನಿರ್ದೇಶನ ನೀಡಿದ್ದರು ಎನ್ನಲಾಗಿದೆ.
ಹಿರಿಯ ಬಿಎಸ್‌ಪಿ ನಾಯಕರು ಪಕ್ಷದವರು ಹಣ ಸಂಗ್ರಹಿಸಿ ಮಾಯಾವತಿಯವರಿಗೆ ಕಳುಹಿಸಲು ಆದೇಶಿಸುವ ಮಾಹಿತಿಗಳು, ನಂಬರ್‌ಗಳನ್ನು ಹೊಂದಿದ ಸಂಪೂರ್ಣ ವಿವರಗಳೊಂದಿಗೆ ಬ್ಯಾಂಕ್ ಡ್ರಾಫ್ಟ್‌ಗಳು, ಬ್ಯಾಂಕಿನ ಹೆಸರು ಮುಂತಾದ ವಿವರ ಈ ಸಿಡಿಯಲ್ಲಿವೆ ಎಂದು ಸಿಂಗ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಮಾಯಾವತಿ ಮತ್ತು ಬಿಎಸ್‌ಪಿ ನಾಯಕರುಗಳು ಅಕ್ರಮವಾಗಿ ಹಣ ಸಂಗ್ರಹ ಮಾಡಿದ್ದು, ಅವರ ಬ್ಯಾಂಕ್ ಖಾತೆಗಳನ್ನು ಸಿಬಿಐ ತನಿಖೆಗೊಳಪಡಿಸಬೇಕು ಸಿಂಗ್ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಈ ಸಂಬಂಧ ಸಮಾಜವಾದಿ ಪಕ್ಷವು ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಿದ್ದು, ಬಿಎಸ್‌ಪಿಯ ಮಾನ್ಯತೆಯನ್ನು ರದ್ದುಪಡಿಸಲು ಒತ್ತಾಯಿಸುವುದಾಗಿಯೂ ಅವರು ಹೇಳಿದ್ದಾರೆ.
|