ನಮ್ಮ ಪಕ್ಷವು ಶ್ರೀಲಂಕಾದ ತಮಿಳರ ಕುರಿತು ಹೊಂದಿರುವ ಕಾಳಜಿಯನ್ನು ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್‌ಟಿಟಿಇಗೆ ಸಮೀಕರಿಸಬಾರದು ಎಂಬುದಾಗಿ ಸಿಪಿಐ-ಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಹೇಳಿದ್ದಾರೆ.
"ಶ್ರೀಲಂಕಾದಲ್ಲಿರುವ ತಮಿಳರ ಕುರಿತು ಸಿಪಿಐ-ಎಂ ತೀವ್ರ ಕಳವಳ ಹೊಂದಿದೆ. ಆದರೆ ನಮ್ಮ ಈ ಕಾಳಜಿಯನ್ನು ಯಾವುದೇ ಶಕ್ತಿಗಳು ಎಲ್‌ಟಿಟಿಯನ್ನು ಬೆಂಬಲಿಸಲು ದುರ್ಬಳಕೆ ಮಾಡಬಾರದು" ಎಂಬುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಮಾಯಕ ತಮಿಳರ ರಕ್ಷಣೆಗಾಗಿ ಯುಪಿಎ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು ಶ್ರೀಲಂಕಾದಲ್ಲಿರುವ ತಮಿಳರು ಮತ್ತು ಎಲ್‌ಟಿಟಿಇಯನ್ನು ಸಮೀಕರಿಸಬಾರದು ಎಂಬುದಾಗಿ ನುಡಿದರು.
ಶ್ರೀಲಂಕಾ ತಮಿಳರ ಸ್ವಾಯತ್ತತಾ ಬೇಡಿಕೆ ಈಡೇರಿಕೆಗಾಗಿ, ದ್ವೀಪರಾಷ್ಟ್ರದ ಕಾನೂನು ಚೌಕಟ್ಟಿನಲ್ಲಿ ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಬೃಂದಾ ಕಾರಟ್ ನುಡಿದರು. |