ಇತ್ತೀಚೆಗೆ ನಡೆದಿದ್ದ ಉಪಚುನಾವಣೆಯಲ್ಲಿ ಸ್ಫರ್ಧಿಸಿ ಸೋಲನ್ನಪ್ಪಿರುವ ಜಾರ್ಖಂಡ್ ಮುಖ್ಯಮಂತ್ರಿ ಶಿಬುಸೊರೇನ್ ಅವರು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಜಾರ್ಖಂಜ್ ಮುಕ್ತಿ ಮೋರ್ಚಾದ ಶಾಸಕ ಚಂಪಾಯ್ ಸೊರೇನ್ ಅವರನ್ನು ತನ್ನ ಉತ್ತರಾಧಿಕಾರಿ ಎಂದು ಭಾನುವಾರ ಘೋಷಿಸುವ ಮೂಲಕ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದರು.
ಸೆರಾಯ್ಕೇಲಾ ಕ್ಷೇತ್ರದ ಶಾಸಕರಾಗಿರುವ ಚಂಪಾಯ್ ಅವರನ್ನು ಜೆಎಂಎಂನ ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
"ಪಕ್ಷವು ಚಂಪಾಯ್ ಅವರನ್ನು ತನ್ನ ಉತ್ತರಾಧಿಕಾರಿ ಎಂದು ನಿರ್ಧರಿಸಿದೆ. ಪಕ್ಷದ ನಿರ್ಧಾರವನ್ನು ತಾನು ಸೋನಿಯಾ ಗಾಂಧಿ ಸೇರಿದಂತೆ ಎಲ್ಲಾ ಯುಪಿಎ ನಾಯಕರಿಗೆ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಅವರಿಗೆ ಕಳುಹಿಸಿದ್ದು ಅವರೀಗ ನಿರ್ಧಾರ ಕೈಗೊಳ್ಳಬೇಕಾಗಿದೆ" ಎಂದು ಸೊರೇನ್ ಹೇಳಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್, ಆರ್‌ಜೆಡಿ ಹಾಗೂ ಸ್ವತಂತ್ರ ಶಾಸಕರು ಇಲ್ಲಿನ ಹೋಟೇಲೊಂದರಲ್ಲಿ ಎರುಡು ಸುತ್ತುಗಳ ರಹಸ್ಯ ಸಭೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮಧುಕೋಡಾ ಅವರ ನಿವಾಸದಲ್ಲಿ ಇನ್ನೊಂದು ಸುತ್ತಿನ ಮಾತುಕತೆ ನಡೆದಿದೆ. |