ಸತ್ಯಂ ಹಗರಣದ ಒಂದೊಂದೇ ಹುಳುಕುಗಳು ಹೊರಬರತೊಡಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ತಂಡಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಹಂಗಾಮಿ ಸಿಇಒ ರಾಮ್ ಮೈನಾಂಪತಿ ಅವರು ಸತ್ಯಂ ಸಂಸ್ಥಾಪಕ ರಾಮಲಿಂಗ ರಾಜು ಮತ್ತು ಇತರ ಎಲ್ಲಾ ನಿರ್ದೇಶಕರ ವೇತನದ ಮೊತ್ತಕ್ಕಿಂತಲೂ ಹೆಚ್ಚು ವರಮಾನ ಪಡೆಯುತ್ತಿದ್ದರು ಎಂಬ ಅಂಶವು ಹೊರಬಂದಿದೆ.
ಡಿಸೆಂಬರ್ 16ರಂದು ಮೇತಾಸ್ ಘಟನೆಯಿಂದಾಗಿ ಸತ್ಯಂ ಮಂಡಳಿ ತೊರೆದಿದ್ದ ಹಲವು ಸ್ವತಂತ್ರ ನಿರ್ದೇಶಕರು ಮಾಸಿಕ ಕಮಿಶನ್ ಮತ್ತು ಸಿಟ್ಟಿಂಗ್ ಫೀ ಹೆಸರಲ್ಲಿ ಕನಿಷ್ಠ ಒಂದು ಲಕ್ಷ ರೂ. ಪಡೆಯುತ್ತಿದ್ದರು.
ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ತಂಡದಿಂದ ವಿಚಾರಣೆಗೊಳಗಾಗಿರುವ ಮೇನಾಂಪತಿ ಅವರು ಮಾರ್ಚ್ 2008ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಒಟ್ಟು 3.5 ಕೋಟಿ ರೂ. ಒಟ್ಟು ಪ್ಯಾಕೇಜ್ ಪಡೆದಿದ್ದರು. ಆದರೆ, ಸತ್ಯಂ ಸಂಸ್ಥಾಪಕರಿಗೆ ದೊರೆತಿದ್ದರು ಇದರ ಐದನೇ ಒಂದರಷ್ಟು ಮೊತ್ತ ಮಾತ್ರ.
ಮೈನಾಂಪತಿ ಹೊರತುಪಡಿಸಿ, ಇತರೆಲ್ಲಾ ನಿರ್ದೇಶಕರು ಈ ಸಮಯಾವಧಿಯಲ್ಲಿ ವೇತನ, ಕಮಿಶನ್, ಸಿಟ್ಟಿಂಗ್ ಫೀ, ವೃತ್ತಿ ಶುಲ್ಕ ಮತ್ತಿತರ ಶುಲ್ಕಗಳ ರೂಪದಲ್ಲಿ ಗಳಿಸಿಕೊಂಡದ್ದು 2.6 ಕೋಟಿ ರೂ. ಎಂದು ಕಂಪನಿಯ ದಾಖಲೆಗಳು ಹೇಳುತ್ತವೆ.
ತೀವ್ರ ಅಚ್ಚರಿ ಮೂಡಿಸಿರುವ ಸಂಗತಿಯೆಂದರೆ, ಮೈನಾಂಪತಿ ಮತ್ತು ಇತರ ನಿರ್ದೇಶಕರ ವೇತನದ ನಡುವಿರುವ ಸುಮಾರು ಒಂದು ಕೋಟಿ ರೂ.ಗಳ ಅಗಾಧ ಅಂತರ. ಎರಡನೇ ಅತಿದೊಡ್ಡ ಪ್ಯಾಕೇಜ್ ನೀಡಲಾಗಿರುವ ಸತ್ಯಂನ ಸ್ವತಂತ್ರ ನಿರ್ದೇಶಕ ಕೃಷ್ಣ ಜಿ.ಪಲೆಪು ಅವರ ಮತ್ತು ಇತರ ನಿರ್ದೇಶಕರ ಪ್ಯಾಕೇಜಿನ ಒಟ್ಟು ಮೊತ್ತದ ಅಂತರವು ಕೂಡ ಹೆಚ್ಚೂ-ಕಡಿಮೆ ಇಷ್ಟೇ ಆಗಿದೆ.
ಮೈನಾಂಪತಿ ಮತ್ತು ಪಲೆಪು (91.91 ಲಕ್ಷ) ಅವರ ಬಳಿಕ ರಾಮಲಿಂಗ ರಾಜು ಅವರ ಪ್ಯಾಕೇಜ್ ಮೊತ್ತ 60.4 ಲಕ್ಷ ರೂ. ಆಗಿದ್ದರೆ ಸ್ವತಂತ್ರ ನಿರ್ದೇಶಕರು ವರ್ಷಕ್ಕೆ 12ರಿಂದ 13.2 ಲಕ್ಷದಷ್ಟು ಪ್ಯಾಕೇಜ್ ಪಡೆಯುತ್ತಿದ್ದರು. |