ಸತ್ಯಂ ಕಂಪ್ಯೂಟರ್ಸ್‌ನಲ್ಲಿ ನಡೆದಿರುವ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ರಾಮಲಿಂಗಾ ರಾಜು ಅವರು ಇದೀಗ ಏನೇ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳಲಿ, ಆದರೆ ಆದಾಯ ತೆರಿಗೆ ಇಲಾಖೆಯು 2002ರಿಂದಲೇ ಸತ್ಯಂನ ಬೆನ್ನು ಬಿದ್ದಿತ್ತು ಎಂಬ ಅಂಶಗಳು ಬೆಳಕಿಗೆ ಬಂದಿವೆ.
ಹೈದರಾಬಾದಿನ ಆದಾಯ ತೆರಿಗೆ ಇಲಾಖೆಯು 2002ರಲ್ಲೇ ಸತ್ಯಂನ ಹಲವು ಕಚೇರಿಗಳಲ್ಲಿ ಶೋಧ ನಡೆಸಿದ್ದು, ಅವರು ತಮ್ಮ ಸ್ನೇಹಿತರು ಮತ್ತು ಬಂಧುಗಳ ಹೆಸರಿನಲ್ಲಿ ಹಲವಾರು ಬೇನಾಮಿ ಖಾತೆಗಳನ್ನು ಹೊಂದಿದ್ದರು ಎಂಬುದನ್ನು ಪತ್ತೆ ಮಾಡಿತ್ತು.
ಈ ಖಾತೆಗಳಲ್ಲಿ ಸುಮಾರು 29.5 ಕೋಟಿ ರೂಪಾಯಿಗಳ ನಿರಖು ಠೇವಣಿ ಈ ಖಾತೆಗಳಲ್ಲಿ ಕಂಡು ಬಂದಿತ್ತು. ಈ ಹಣವನ್ನು ಸತ್ಯಂ ಶೇರುಗಳ ವ್ಯವಹಾರಕ್ಕೆ ಬಳಸಿಕೊಂಡು ಆಂತರಿಕ ವ್ಯವಹಾರ ರೂಢಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿತ್ತು ಎಂದು ಹೇಳಲಾಗಿದೆ.
ಈ ಮಧ್ಯೆ ಮೇತಾಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯು ರಾಷ್ಟ್ರದ ಬೃಹತ್ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸುಮಾರು 500 ಕೋಟಿ ರೂಪಾಯಿ ಬಾಕಿ ಇದೆ, ಅಲ್ಲದೆ ಇದನ್ನು ಎನ್‌ಪಿಎ ಆಗಿ ಘೋಷಿಸಬೇಕಾಗಬಹುದು ಎಂಬುದಾಗಿ ಬ್ಯಾಂಕ್ ತಿಳಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇತರ ಬ್ಯಾಂಕುಗಳು ಮಾಹಿತಿಗಳನ್ನು ಹೊರಗೆಡಹಲು ನಿರಾಕರಿಸಿದ್ದಾವಾದರೂ, ರಾಷ್ಟ್ರದ ಅತಿ ದೊಡ್ಡ ಕಾರ್ಪೋರೇಟ್ ವಂಚನೆಯಲ್ಲಿ ಭಾರತದ ಬ್ಯಾಂಕಿಂಗ್ ವಲಯವು ಹಾನಿಯಾಗದೆ ಉಳಿದಿದೆ ಎಂಬುದು ನಂಬಿಕೆಗೆ ದೂರವಾದ ಮಾತು. |