ಮುಂಬೈ ದಾಳಿಕೋರರನ್ನು ಕಣ್ಣಾರೆ ಕಂಡಿದ್ದ ಮಹಿಳೆ ಇದ್ದಕ್ಕಿದ್ದಂತೆ ಕಾಣೆಯಾಗಿರುವ ಕಾರಣ 26/11ರ ದಾಳಿಯ ತನಿಖೆಗೆ ಹಿನ್ನಡೆ ಉಂಟಾಗಿದೆ.
ಭದ್ರತಾ ಪಡೆಗಳ ಗುಂಡಿಗೆ ಈಡಾಗಿ ಸಾವನ್ನಪ್ಪಿದ್ದ ಒಂಬತ್ತು ಉಗ್ರರ ದೇಹವನ್ನು ಗುರುತಿಸಿದ್ದ ಅನಿತಾ ಉದಯ್ ಎಂಬ ಮಹಿಳೆ ಜನವರಿ 11ರಿಂದ ಕಾಣೆಯಾಗಿದ್ದಾರೆಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮುಂಬೈದಾಳಿ ನಡೆಸಿದ ನವೆಂಬರ್ 26ರಂದು ದೋಣಿ ಇಳಿದು ಬರುತ್ತಿದ್ದ ಉಗ್ರರನ್ನು 47ರ ಹರೆಯದ ಅನಿತಾ ಗಮನಿಸಿದ್ದರು. ಅವರು ನಗರದ ಜೆಜೆ ಆಸ್ಪತ್ರೆಯಲ್ಲಿ ಇವರ ಮೃತದೇಹವನ್ನು ಗುರುತಿಸಿದ್ದರು.
ಅನಿತಾ ನಾಪತ್ತೆ ಹಿನ್ನೆಲೆಯಲ್ಲಿ ಅವರ ಶೋಧಕ್ಕಾಗಿ ಪೊಲೀಸರು ಕ್ರಮಕೈಗೊಂಡಿದ್ದಾರೆ. ಅನಿತಾ ಪುತ್ರಿ ಸೀಮಾ ಕೇತನ್ ಜೋಶಿ ಎಂಬವರು ತನ್ನ ತಾಯಿ ಮೀನುಗಾರ ಕಾಲೋನಿಯ ಕಪ್ಪೆ ಪರಡೆ ಎಂಬಲ್ಲಿನ ನಿವಾಸದಿಂದ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಪೊಲೀಸರು ಈ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಅನಿತಾ ಅವರು ತನ್ನ ಮನೆಯ ಸಮೀಪ ದೋಣಿಯೊಂದರಲ್ಲಿ ಇದ್ದರು. ಉಗ್ರರು ಮುಂಬೈಗೆ ಬಂದಿಳಿದಿದ್ದಾಗ ಇವರನ್ನು ಕಂಡಿದ್ದ ಅನಿತಾ, ಉಗ್ರರನ್ನು ಕಂಡು ಸಂಶಯ ಉಂಟಾಗಿದ್ದು, ನೀವೆಲ್ಲಿಗೆ ಹೋಗುತ್ತಿದ್ದೀರಿ ಎಂಬುಬಾಗಿ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ್ದ ಉಗ್ರರು, "ನಿಮಗೇನು ಚಿಂತೆ, ನಿಮ್ಮ ಕೆಲಸ ನೋಡಿಕೊಳ್ಳಿ" ಎಂಬ ಉಡಾಫೆಯ ಉತ್ತರ ನೀಡಿದ್ದರು ಎಂದು ಹೇಳಲಾಗಿದೆ. |