ಒಂದೆಡೆ ನೆಹರೂ ಕುಟುಂಬದ ಕುಡಿ ರಾಹುಲ್ ಗಾಂಧಿಗೆ ಪಟ್ಟಕಟ್ಟಲು ತಯಾರಿ ನಡೆಯುತ್ತಿದ್ದರೆ, ಇನ್ನೊಂದೆಡೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಆರಂಗೇಟ್ರಂ ಮಾಡಲಿದ್ದಾರೆಯೇ? ಹೌದು ಅನ್ನುತ್ತಿವೆ ಮೂಲಗಳು.ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿದ ಒತ್ತಡದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಮುರಾದಾಬಾದ್ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದಿದ್ದಾರೆ ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್. ಪ್ರಿಯಾಂಕಾ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಇದರಿಂದ ಪಕ್ಷಕ್ಕೆ ಲಾಭ ಆಗಲಿದೆ ಎಂಬುದು ಅನೇಕ ಮುಖಂಡರ ಅಭಿಮತ. ಇವುಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ಈ ಬಗ್ಗೆ ಚಿಂತನೆ ನಡೆಸಿದೆ ಎಂದು ಅವರು ಹೇಳಿದ್ದಾರೆ.ಪ್ರಿಯಾಂಕಾ ಯುವಶಕ್ತಿ ಸಂಕೇತದಂತಿದ್ದಾರೆ. ಅಲ್ಲದೇ ಯುವ ಜನತೆ ಹಾಗೂ ಮಹಿಳೆಯರನ್ನು ಆಕರ್ಷಿಸುವ ಎಲ್ಲ ಶಕ್ತಿಯೂ ಇದೆ. ಪ್ರಿಯಾಂಕಾ ಸ್ಪರ್ಧೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಅಷ್ಟೆ ಅಲ್ಲ, ದೇಶಕ್ಕೂ ಲಾಭ ಆಗಲಿದೆ ಎಂದು ಜಯಂತಿ ನಟರಾಜನ್ ಹೇಳಿದ್ದಾರೆ. ಒಂದೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದರೆ ಪ್ರಿಯಾಂಕಾ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ ಎಂಬುದು ಕಾಂಗ್ರೆಸ್ ವಕ್ತಾರೆಯ ಅಭಿಪ್ರಾಯ. ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರು ಮುರಾದಾಬಾದ್ ಜಿಲ್ಲೆಯವರು. ಅಮ್ಮ ಸೋನಿಯಾಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಸಹೋದರ ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. |